ರೇಷನ್ ಕಾರ್ಡ್ ಇರುವ ಎಲ್ಲರಿಗೂ ರಾಷ್ಟ್ರಧ್ವಜ ಖರೀದಿಸುವಂತೆ ರೇಷನ್ ಅಂಗಡಿಯವರು ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ರಾಷ್ಟ್ರೀಯತೆಯನ್ನು ಎಂದಿಗೂ ಮಾರಲು ಸಾಧ್ಯವಿಲ್ಲ. ರೇಷನ್ ನೀಡುವಾಗ ಬಡವರಿಂದ ತ್ರಿವರ್ಣ ಧ್ವಜಕ್ಕಾಗಿ 20 ರೂ. ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿಯು ಧ್ವಜದ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಮಾರಾಟ ಮಾಡುತ್ತಿದೆ. ಇದರಿಂದ ಬಡವರ ಆತ್ಮಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಬಗ್ಗೆ ಹಿಂದಿಯಲ್ಲಿ ಫೇಸ್‌ಬುಕ್ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಭಾರತದ ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯಾಗಿದೆ. ತ್ರಿವರ್ಣ ಧ್ವಜ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ.
“ತ್ರಿವರ್ಣ ಧ್ವಜದ ಜೊತೆಗೆ ಬಿಜೆಪಿ ಸರ್ಕಾರವು ನಮ್ಮ ದೇಶದ ಬಡವರ ಸ್ವಾಭಿಮಾನದ ಮೇಲೂ ದಾಳಿ ಮಾಡುತ್ತಿದೆ” ಎಂದಿರುವ ರಾಹುಲ್ ಗಾಂಧಿ ಕೆಲವು ಪಡಿತರ ಚೀಟಿದಾರರು ತಮ್ಮ ಬಳಿ ರೇಷನ್ ಅಂಗಡಿಯವರು 20 ರೂ. ಕೊಟ್ಟು ಬಾವುಟ ಖರೀದಿಸಲು ಒತ್ತಾಯಿಸಿದ್ದಾರೆ ಎಂದು ದೂರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
