ಶಿವಮೊಗ್ಗ ಸುಬ್ಬಣ್ಣ. ನನಗೆ ಆಕಾಶವಾಣಿ ಸೇವೆಯಲ್ಲಿ ಸಿಕ್ಕ ಆತ್ಮೀಯ ಸ್ನೇಹಿತರು. ನೀವು ಯಾವಾಗಾದರೂ ಕರೀರಿ ನಾನು ಭದ್ರಾವತಿ ನಿಲಯಕ್ಕೆ ಬರ್ತೀನಿ ಅಂತ ಹೇಳುತ್ತಿದ್ದರು.
ಭದ್ರಾವತಿ ಆಕಾಶವಾಣಿಯಲ್ಲಿ
ಆಹ್ವಾನಿತ ಶ್ರೋತೃಗಳ ಸಮ್ಮುಖ ನಡೆದ ಭಾವಗೀತೆಗಳ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡಿದ್ದರು. ಅವರು ಹಾಡಿದ
ಏನ ಮೀಸಲು ಮಾಡಲೋ ಎಂಬ ಗೀತೆ ನನ್ನ ಕಿವಿಯಲ್ಲಿ ಗಂಯ್ ಗುಟ್ಟುತ್ತಿದೆ.
“ಏನು ಸುಧೀಂದ್ರ ನೀವಿನ್ನೂ ಚತುರ್ಭುಜರಾಗಿಲ್ಲವ?” ಎಂದು ನನಗೆ ಸಲಿಗೆಯಿಂದಲೂ ಮಾತಾಡಿಸಿದ್ದುಂಟು. ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡುವ ಸಂದರ್ಭದಲ್ಲಿ ಹಾಡಿನ ಆರಂಭ ರೆಕಾರ್ಡಿಂಗ್ ಸ್ಯಾಂಪಲ್
ಕೇಳಿ ಇಲ್ಲಿ ಬಿಜಿಎಂ ಕಡಿಮೆ ಲೆವೆಲ್ ಇದೆ. ನಂದು ಮೈಕು ಸ್ವಲ್ಪದೂರ ಇದೆ”;ಎಂದೆಲ್ಲಾ ಅತ್ಯಂತ ಕಾಳಜಿಯಿಂದ ಮಾತನಾಡಿ ನಂತರ ಫೈನಲ್ ರೆಕಾರ್ಡಿಂಗ್ ಆಗುತ್ತಿತ್ತು. ಅವರಿಗೆ ಸಹ ಕಲಾವಿದರ ಬಗ್ಗೆಯೂ ಅತ್ಯಂತ ಗೌರವ.
ಭದ್ರಾವತಿಯಲ್ಲಿ ಸಂಗೀತ ವಿಭಾಗ ಪೂರ್ಣ ಆರಂಭವಾಗಿರಲಿಲ್ಲ. ಅಷ್ಟರಲ್ಲಿ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ಅಲ್ಲಿ ತಮ್ಮ ಲೆಕ್ಕಪರಿಶೋಧಕ ವೃತ್ತಿಯನ್ನ ಮುಂದುವರೆಸಿದರು.
ಅವಕಾಶಗಳ ಬಾಗಿಲು ಅವರ ಪ್ರತಿಭೆಗೆ ವಿಶಾಲವಾಗಿ ತೆರೆದುರಕೊಂಡವು.
ಹಾಡಿನ ಡಿಸ್ಕುಗಳು, ಶರೀಫರು, ಕುವೆಂಪು, ಬೇಂದ್ರೆ ಲಕ್ಷ್ಮೀನಾರಾಯಣ ಭಟ್ಟರು..
ಹೀಗೆ ಅನೇಕ ಕವಿಗಳ ಕವಿತೆಗಳಿಗೆ ಅವರು ಕಂಠಶ್ರೀ ನೀಡಿದರು. ಕಾಡು ಕುದುರೆ ಚಿತ್ರದ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯ ಮನ್ನಣೆಯೂ ಅರಸಿ ಬಂದಿತು.
ನಾನು ಅವರಿಗೆ ಒಮ್ಮೆ ಎದುರಿಗೇ
ಹೇಳಿದ್ದೆ” ನೀವು ಪೂರ್ಣ ಸಿನಿಮಾ ಕ್ಷೇತ್ರಕ್ಕೆ ಹೋಗಿಬಿಟ್ಟರೆ ಕನ್ನಡ ಭಾವಗೀತೆಗಳ ಗಾಯನ ಕ್ಷೇತ್ರಕ್ಕೆ ಬಡತನ ಬರುತ್ತೆ ಅಂತ.ಅದೇನು ಅವರ ಮನಸ್ಸಿಗೆ ನಾಟಿತೋ ಗೊತ್ತಿಲ್ಲ. ಅಥವಾ ಆಲೋಚನೆಯೇ ಹಾಗಿತ್ತೋ ಏನೋ ಕನ್ನಡ ಭಾವಗೀತಾಕಾಶದ ಧೃವತಾರೆಯಾದರು. .
ನೀವೀಗ ಅವರು ಹಾಡಿದ ಕುವೆಂಪು ಅವರ ಆನಂದಮಯ ಈ ಜಗ ಹೃದಯ… ಹಾಡು ಕೇಳಿರಿ. ನಿಮಗೆ
ಸೂರ್ಯೋದ ,ಚಂದ್ರೋದಯದ ಅನನ್ಯ ಕಲ್ಪನೆ ನಿಮ್ಮನ್ನ ಬಾಚಿ ತಬ್ಬುತ್ತದೆ. ಬೇಂದ್ರೆ ಅವರ ನಾರಿ ನಿನ್ನ ಮಾರಿ ಮ್ಯಾಗ ನಗೀ ನವಿಲು ಆಡತಿತ್ತ.. ಗಾಯನ ಕೇಳಿರಿ
ನಿಮಗೆ ಕವಿಯ ಭಾವವೇ ಮೈಯೊಳಗೆ ಸಂಚರಿಸಿದ ಅನುಭವವಾಗುತ್ತದೆ.
ಸುಬ್ರಹ್ಮಣ್ಯ…ಸುಬ್ಬಣ್ಣ ಆಗಿ ಕನ್ನಡ
ಗಾಯನ ಜಗತ್ತಿಗೆ ಶಿವಮೊಗ್ಗ ಸುಬ್ಬಣ್ಣ ಆಗಿ ನೀವೀಗ ಅಮರ ಧ್ವನಿ ಮೂಲಕ ಚಿರಂಜೀವಿ.
ನಿಮಗಿದೋ ನಮ್ಮ ನುಡಿ ನಮನ.