ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗೆ ಲಂಚ ಪಡೆಯುವುದೇ ನಿಯಮವಾಗಿ ಹೋಗಿದೆ ಹಾಗೂ ಇದು ಕ್ಯಾನ್ಸರ್‌ಗಿಂತ ಗಂಭೀರವಾಗಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಹಿಂದಿನ ಜಿಲ್ಲಾಧಿಕಾರಿ ಜೆ.
ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ, ತೀರ್ಪಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಟು ಶಬ್ದಗಳಿಂದ ಟೀಕಿಸಿದೆ.
ಮಂಜುನಾಥ್ ಹಾಗೂ ದೂರುದಾರ ಅಜಂ ಪಾಷಾ ನಡುವಿನ ಸಂಭಾಷಣೆಯನ್ನು ಪೊಲೀಸರ ಪಂಚನಾಮೆಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ, ದೂರುದಾರರು ಮತ್ತು ಆರೋಪಿಗಳು ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ ಎನ್ನುವುದು ಬಹಿರಂಗವಾಗಿದ್ದು, ದಾಖಲೆಯಲ್ಲಿ ಉಲ್ಲೇಖಿಸಿರುವಷ್ಟು ಹಣಕ್ಕೆ ಮೊದಲ ಆರೋಪಿ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಬೇಡಿಕೆ ಇಟ್ಟಿದ್ದಾರೆ.
ಮಹೇಶ್ ಮತ್ತು ಅಜಂ ಪಾಷಾ ನಡುವಿನ ಸಂಭಾಷಣೆಯ ಡಿವಿಡಿಯನ್ನೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅರ್ಜಿದಾರ ಮಂಜುನಾಥ್ ಪರ ವಕೀಲರು, ಸಾಮಾನ್ಯವಾಗಿ ಜಿಲ್ಲಾಧಿಕಾರಿ ಆದೇಶ ಸಿದ್ಧಪಡಿಸಿ, ಅದನ್ನು ಅಧೀನ ಅಧಿಕಾರಿಗಳಿಗೆ ನೀಡುತ್ತಾರೆ. ಆನಂತರ ಜಿಲ್ಲಾಧಿಕಾರಿ ಆದೇಶ ಓದುತ್ತಾರೆ ಎಂದು ವಾದಿಸಿದ್ದಾರೆ. ಇದು, ಆದೇಶ ಸಿದ್ಧಪಡಿಸಿ ಓದದೇ ಇಟ್ಟುಕೊಳ್ಳುವುದು ಲಂಚಕ್ಕಾಗಿ ಬೇಡಿಕೆ ಇಡುವ ಕಂದಾಯ ಇಲಾಖೆಯ ಮೋಡಸ್ ಆಪರಂಡಿಯನ್ನು (ಕಾರ್ಯ ವಿಧಾನ) ಬಹಿರಂಗಪಡಿಸಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಮೇಲಿನ ಶ್ರೇಣಿಯಿಂದ ಕೆಳ ಹಂತದವರೆಗೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಲಂಚವಿಲ್ಲದೆ ಅಲ್ಲಿ ಯಾವುದೇ ಕಡತ ಮುಂದಕ್ಕೆ ಹೋಗುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿನ ಅಧಿಕೃತ ಕೆಲಸಗಳಿಗೆ ಲಂಚ ಪಡೆಯುವುದೇ ನಿಯಮವಾಗಿ ಹೋಗಿದ್ದು, ಇದು ಕ್ಯಾನ್ಸರ್‌ಗಿಂತ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಎಲ್ಲ ತಿಳಿದಿದ್ದರೂ ಅರ್ಜಿದಾರ ಮಂಜುನಾಥ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಥಮ ಮಾಹಿತಿ ಹೇಳಿಕೆಯಲ್ಲಿ ದೂರುದಾರ ಅಜಂ ಪಾಷಾ ಅರ್ಜಿದಾರರ ಹೆಸರು ಉಲ್ಲೇಖಿಸಿದ್ದರೂ ಎಫ್‌ಐಆರ್‌ನಲ್ಲಿ ಅವರ ಹೆಸರು ಇಲ್ಲ. ಒಂದೊಮ್ಮೆ ಮಂಜುನಾಥ್‌ಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳಿದ್ದು, ಸಾಕ್ಷ್ಯ ತಿರುಚುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಆದ್ದರಿಂದ, ತನಿಖೆಗೆ ಬಾಕಿ ಇರುವ ಪ್ರಕರಣದ ಮೂರನೇ ಆರೋಪಿಯಾಗಿರುವ ಮಂಜುನಾಥ್‌ಗೆ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.