ಸಂಸತ್ತಿನ ಮುಂಗಾರು ಅಧಿವೇಶನ ಗದ್ದಲದೊಂದಿಗೆ ಆರಂಭವಾಗಿದೆ. ಇದರಿಂದಾಗಿ ಆರಂಭದ ದಿನ ಹೆಚ್ಚಿನ ಪ್ರಮಾಣ ದಲ್ಲಿ ಕಲಾಪ ನಡೆಸಲು ಸಾಧ್ಯವಾಗದೆ ಲೋಕ ಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಇದು ನನಗೆ ಕೊನೆಯ ಸಂಸತ್ ಅಧಿವೇಶನ. ಹೀಗಾಗಿ ಚೆನ್ನಾಗಿ ಚರ್ಚೆ ನಡೆಸಿ ಉತ್ತಮ ಬೀಳ್ಕೊಡುಗೆ ನೀಡಿ ಎಂದು ರಾಜ್ಯಸಭೆಯ ಉಪಸಭಾಪತಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಸಂಸದರನ್ನು ಕೇಳಿಕೊಂಡಿದ್ದರು.
ಆದರೆ ಉಭಯ ಸದನ ಗಳಲ್ಲಿಯೂ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷ ಗಳು ಜಿಎಸ್‌ಟಿ, ಬೆಲೆ ಏರಿಕೆ ಮತ್ತಿತರ ಹಲವು ವಿಚಾರಗಳ ಬಗ್ಗೆ ಕೋಲಾಹಲ ಎಬ್ಬಿಸಿದ್ದರಿಂದ ಕಲಾಪ ಮಂಗಳವಾರಕ್ಕೆ ಮುಂದೂಡಿಕೆಯಾಯಿತು.
ಮುಂಗಾರು ಅಧಿವೇಶನದಲ್ಲಿ ಎಲ್ಲ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆದು ಕಲಾಪಗಳು ಫಲಪ್ರದವಾಗುವಂತೆ ಸಹಕರಿಸಬೇಕು ಎಂದು ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಪ್ರಧಾನಿ ಮೋದಿ ಮನವಿ ಮಾಡಿದ್ದರು.