Friday, October 4, 2024
Friday, October 4, 2024

ದ್ರೌಪದಿ ಮುರ್ಮು & ಯಶ್ವಂತ್ ಸಿನ್ಹಾ ಈರ್ವರ ಲೇಖಾಚಿತ್ರ

Date:

ರಾಷ್ಟ್ರಪತಿ ಚುನಾವಣೆಯ ಅಖಾಡ ಸಜ್ಜಾಗಿ ನಿಂತಿದೆ.
ದ್ರೌಪದಿ ಮುರ್ಮು ಅವರು ಎನ್‌ಡಿಎ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಅವರೂ ಕೂಡ ನಾಮಪತ್ರ ಸಲ್ಲಿಸಿದ್ದಾರೆ.

ಸಂಖ್ಯಾಬಲವು ಮುರ್ಮು ಅವರ ಪರವಾಗಿಯೇ ಇದೆ.
ಆದರೆ, ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿ, ಸಿನ್ಹಾ ಅವರ ಬೆನ್ನಿಗೆ ನಿಂತಿವೆ. ಇಬ್ಬರೂ ಅಭ್ಯರ್ಥಿಗಳ ಪರಿಚಯ, ವಿವಿಧ ಪ‍ಕ್ಷಗಳ ರಾಜಕೀಯ ಲೆಕ್ಕಾಚಾರದ ನೋಟ ಹೀಗಿದೆ:

ದ್ರೌಪದಿ ಮುರ್ಮು
ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆಯಾದ ಮರುದಿನವೇ ದ್ರೌಪದಿ ಮುರ್ಮು ಅವರ ವಿಡಿಯೊ ಒಂದು ವೈರಲ್ ಆಗಿತ್ತು.

ದ್ರೌಪದಿ ಅವರು ದೇವಾಲಯವೊಂದರ ಆವರಣದಲ್ಲಿರುವ ಕಸವನ್ನು ಗುಡಿಸುತ್ತಿರುವ ದೃಶ್ಯವಿದ್ದ ವಿಡಿಯೊ ಅದು. ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಅವರಿಗೆ ಝಡ್‌ ಶ್ರೇಣಿಯ ಭದ್ರತೆ ನೀಡಲಾಗಿತ್ತು. ಅವರು ಕಸಗುಡಿಸುತ್ತಿರುವ ವಿಡಿಯೊದಲ್ಲಿ ಅವರ ಭದ್ರತಾ ಸಿಬ್ಬಂದಿ ಸಹ ಇದ್ದರು. ದ್ರೌಪದಿ ಅವರು ಬಿಹಾರ, ಪೂರ್ವ ಭಾರತದ ಒಡಿಶಾ, ಛತ್ತೀಸಗಡ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ತ್ರಿಪುರಾ, ಅಸ್ಸಾಂನಲ್ಲಿ ಅಂದಾಜು ಒಂದು ಕೋಟಿಯಷ್ಟು ಜನಸಂಖ್ಯೆ ಇರುವ ಸಂತಾಲಾ ಬುಡಕಟ್ಟಿಗೆ ಸೇರಿದ್ದಾರೆ.

1997ರಲ್ಲಿ ರಾಜಕೀಯಕ್ಕೆ ಕಾಲಿರಿಸಿದ ನಂತರ ಅವರು, ರಾಜಕೀಯ ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿ ಮೇಲೇರುತ್ತಲೇ ಬಂದಿದ್ದಾರೆ.
ಒಡಿಶಾದ ಮಯೂರ್‌ಗಂಜ್‌ನ ಬೈಡಾಪೋಸಿ ದ್ರೌಪದಿ ಅವರ ಹುಟ್ಟೂರು. ಅವರ ತಂದೆ ಬಿರಂಚೀ ನಾರಾಯಣ ಟುಡು ಅವರು, ಬೈಡಾಪೋಸಿ ಗ್ರಾಮದ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು ಅವರ ತಾತ ಆ ಹುದ್ದೆ ನಿರ್ವಹಿಸಿದ್ದರು. ಹೀಗೆ ಗ್ರಾಮಾಡಳಿತದ ಅನುಭವವಿದ್ದ ಟುಡು ಕುಟುಂಬದಲ್ಲಿ ದ್ರೌಪದಿ ಅವರು 1958ರ ಜೂನ್ 20ರಂದು ಜನಿಸಿದರು.

ಮಯೂರ್‌ಬಂಜ್‌ನಲ್ಲಿ ಶಾಲಾ ಶಿಕ್ಷಣ, ಭುವನೇಶ್ವರದಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಅವರು ಕಲಾ ಪದವಿ ಪಡೆದಿದ್ದಾರೆ. ಶಿಕ್ಷಣದ ನಂತರ ಒಡಿಶಾ ನೀರಾವರಿ ಇಲಾಖೆಯಲ್ಲಿ ನೌಕರಿ, ಆನಂತರ ಶಿಕ್ಷಕಿ ಹುದ್ದೆ ನಿರ್ವಹಿಸಿದ ಅನುಭವ ಅವರಿಗಿದೆ.
ಒಡಿಶಾ ರಾಜ್ಯ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ಉಪಾಧ್ಯಕ್ಷೆಯಾಗಿ ಅವರನ್ನು ಆಯ್ಕೆ ಮಾಡಲಾಯಿತು. 2000ದಲ್ಲಿ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್‌ರಂಗಪುರ ಕ್ಷೇತ್ರದಿಂದ ಕಣಕ್ಕೆ ಇಳಿದು ಆರಿಸಿ ಬಂದರು.

ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ದ್ರೌಪದಿ ಸಚಿವೆಯೂ ಆದರು. ಈ ಸರ್ಕಾರದಲ್ಲಿ ಅವರು ಮೀನುಗಾರಿಕೆ, ಹೈನುಗಾರಿಕೆ, ಸಾರಿಗೆ ಮತ್ತು ವಾಣಿಜ್ಯ ಇಲಾಖೆಗಳನ್ನು ನಿರ್ವಹಿಸಿದರು. 2004ರಲ್ಲಿ ಮತ್ತೆ ಶಾಸಕಿಯಾಗಿ ಆಯ್ಕೆಯಾದರು. 2009ರಲ್ಲಿ ಅವರನ್ನು ಬಿಜೆಪಿಯ ರಾಜ್ಯ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು.

2013ರಲ್ಲಿ ಬಿಜೆಪಿಯ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಅವರು ಆಯ್ಕೆಯಾದರು. ನಂತರ 2015ರಲ್ಲಿ ಜಾರ್ಖಂಡ್‌ನ ರಾಜ್ಯಪಾಲೆಯಾಗಿ ಅವರನ್ನು ಆಯ್ಕೆ ಮಾಡಲಾಯಿತು. ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆ, ರಾಜ್ಯಪಾಲರ ಹುದ್ದೆಗೆ ಏರಿದ ಒಡಿಶಾದ ಮೊದಲ ಮಹಿಳೆ ಎಂಬಂತಹ ಹೆಗ್ಗಳಿಕೆಗೆ ಪಾತ್ರರಾದರು. ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಾಧಿಯನ್ನು ಪೂರೈಸಿದ ಮೊದಲಿಗರು ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ. ಈಗ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ಅವರು, ಆ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಯಶವಂತ ಸಿನ್ಹಾ

ಸುದೀರ್ಘ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಯಶವಂತ ಸಿನ್ಹಾ ಅವರು ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅಧ್ಯಾಪಕರಾಗಿ, ಐಎಎಸ್‌ ಅಧಿಕಾರಿಯಾಗಿ, ಕೇಂದ್ರ ಹಣಕಾಸು ಮತ್ತು ವಿದೇಶಾಂಗ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವ ಸಿನ್ಹಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಖರ ಟೀಕಾಕಾರರಲ್ಲಿ ಒಬ್ಬರು. ಬಿಜೆಪಿ ಸರ್ಕಾರದ ‘ಅಸಮರ್ಪಕ ನಡೆ’ಗಳನ್ನು ಬಹಿರಂಗವಾಗಿ ವಿರೋಧಿಸುವ ಛಾತಿ ಹೊಂದಿರುವ ಸಿನ್ಹಾ ಅವರ ಉಮೇದುವಾರಿಕೆಗೆ ಪ್ರತಿಪಕ್ಷಗಳು ಜೈ ಎಂದಿವೆ.

ರಾಷ್ಟ್ರಪತಿಯು ಆಳುವ ಪಕ್ಷದ ರಬ್ಬರ್ ಸ್ಟಾಂಪ್‌ ಆಗಿರಬಾರದು’ ಎಂಬುದು ಸಿನ್ಹಾ ಅವರ ಮಾತು.
ಬಿಜೆಪಿಯಲ್ಲಿ 22 ವರ್ಷಗಳ ಕಾಲ ಇದ್ದ ಅವರು, ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಅವರ ಜೊತೆ ನಿಕಟ ಸಂಪರ್ಕದಲ್ಲಿದ್ದವರು.

1993ರಲ್ಲಿ ಬಿಜೆಪಿ ಸೇರಿದ ಸಿನ್ಹಾ, ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಅತಿಮುಖ್ಯವಾದ ಹಣಕಾಸು ಹಾಗೂ ವಿದೇಶಾಂಗ ಇಲಾಖೆಗಳನ್ನು 1999-2004ರ ಅವಧಿಯಲ್ಲಿ ನಿಭಾಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಪಕ್ಷದಲ್ಲಿ ಸುದೀರ್ಘ ಅನುಭವ, ಆಡಳಿತದ ಪಕ್ವತೆ, ವರ್ಚಸ್ಸು ಇದ್ದರೂ, ನರೇಂದ್ರ ಮೋದಿ ನೇತೃತ್ವದ ಆಡಳಿತ ಆರಂಭವಾದ ಬಳಿಕ ಸಿನ್ಹಾ ಅವರಿಗೆ ಇದ್ದ ಮಹತ್ವ ಕುಸಿಯಿತು. 2014ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ‘ಪಕ್ಷವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ಯಾಗಿದೆ ಎಂದು ಆರೋಪಿಸಿದರು. ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಹಿರಿಯರ ಸಾಲಿಗೆ ಸೇರದೇ, ಪಕ್ಷದ ವಿರುದ್ಧ ಬಂಡೆದ್ದು ಹೊರಬಂದರು.

‘ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆರ್ಥಿಕತೆಯ‌ನ್ನು ಸಂಪೂರ್ಣ ನಾಶ ಮಾಡಿದರು’ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರವನ್ನು ಪ್ರಶ್ನಿಸಿದರು. ಕಾಶ್ಮೀರದ ವಿಚಾರದಲ್ಲಿ ಸರ್ಕಾರದ ನಿರ್ಧಾರಗಳನ್ನು ಕಟುವಾಗಿ ವಿರೋಧಿಸಿದರು. ರಫೇಲ್ ಹಗರಣದಲ್ಲಿ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಪುನರ್ ಪರಿಶೀಲನಾ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿತು. ಮೋದಿ ಅವರೊಂದಿಗೆ ಚರ್ಚಿಸಲು ಸಮಯ ಕೇಳಿದ್ದ ಸಿನ್ಹಾ ಅವರ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ.

1937ರಲ್ಲಿ ಪಟ್ನಾದಲ್ಲಿ ಜನಿಸಿದ ಅವರು ರಾಜಕೀಯ ಶಾಸ್ತ್ರದ ವಿದ್ಯಾರ್ಥಿ. 1962ರವರೆಗೂ ಅವರು ಪಟ್ನಾ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು. ನಂತರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, 24 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಸರ್ಕಾರದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದರು. ಮಹತ್ವದ ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. 1984ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಜನತಾದಳ ಸೇರಿದರು. 1988ರಲ್ಲಿ ಸಂಸತ್ ಪ್ರವೇಶಿಸಿದ ಅವರು, ಮಾಜಿ ಪ್ರಧಾನಿ ಚಂದ್ರಶೇಖರ್ ಸಂಪುಟದಲ್ಲಿ ಅಲ್ಪ ಅವಧಿಗೆ ಸಚಿವರಾಗಿ ಕೆಲಸ ಮಾಡಿದರು.

ವಾಜಪೇಯಿ ಸಂಪುಟದಲ್ಲಿ ಎರಡು ಬಾರಿ ಹಣಕಾಸು ಸಚಿವರಾಗಿದ್ದರು.
2021ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದರು. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಪಕ್ಷವನ್ನು ತ್ಯಜಿಸಿರುವ ಯಶವಂತ್ ಸಿನ್ಹಾ, ‘ರಿಲೆಂಟ್‌ಲೆಸ್’ ಎಂಬ ಆತ್ಮಚರಿತ್ರೆ ಬರೆದಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ 2017ರಲ್ಲಿ ಚುನಾವಣೆ ನಡೆದಾಗ ಬಿಜೆಪಿಯು ರಾಮನಾಥ ಕೋವಿಂದ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಅದುವರೆಗೆ ಕೋವಿಂದ್‌ ಅವರು ಸುದ್ದಿಯಲ್ಲಿ ಇದ್ದವರೇ ಅಲ್ಲ. ರಾಷ್ಟ್ರಪತಿ ಅಭ್ಯರ್ಥಿ ವಿಚಾರದಲ್ಲಿ ಈ ಬಾರಿಯೂ ಬಿಜೆಪಿ ಇದೇ ಶೈಲಿ ಅನುಸರಿಸಿದೆ. ಜಾರ್ಖಂಡ್‌ ರಾಜ್ಯಪಾಲೆಯಾಗಿದ್ದ ದ್ರೌಪದಿ ಮುರ್ಮು ಅವರ ಹೆಸರು ಘೋಷಿಸುವ ವರೆಗೆ ಅವರು ಅಭ್ಯರ್ಥಿಯಾಗಬಹುದು ಎಂಬ ಕಲ್ಪನೆ ಅವರಿಗೇ ಇರಲಿಲ್ಲ.

ಮುರ್ಮು ಅವರು ಒಡಿಶಾದವರು. 2002ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಇದ್ದಾಗಲೂ ರಾಷ್ಟ್ರಪತಿ ಅಭ್ಯರ್ಥಿಯಾಗಿ ವಿಜ್ಞಾನಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರನ್ನು ಬಿಜೆಪಿ ಆಯ್ಕೆ ಮಾಡಿತ್ತು. ಇದು ಕೂಡ ಅಚ್ಚರಿಯ ಆಯ್ಕೆಯೇ ಆಗಿತ್ತು. ಕಲಾಂ ಅವರಿಗೆ ಎನ್‌ಡಿಎಯೇತರ ಪಕ್ಷಗಳ ಬೆಂಬಲವೂ ಸಿಕ್ಕಿತ್ತು.
ರಾಜಕೀಯ ಲೆಕ್ಕಾಚಾರ: ಬಿಜೆಪಿಯ ಅಭ್ಯರ್ಥಿ ಆಯ್ಕೆಯ ಹಿಂದೆ ಚುನಾವಣಾ ರಾಜಕಾರಣದ ಲೆಕ್ಕಾಚಾರ ಇದ್ದೇ ಇರುತ್ತದೆ. ಪರಿಶಿಷ್ಟ ಜಾತಿಯ ಮತಬ್ಯಾಂಕ್‌ ಅನ್ನು ತನ್ನತ್ತ ಸೆಳೆದುಕೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಕಳೆದ ಬಾರಿ ಕೋವಿಂದ್‌ ಅವರನ್ನು ಆಯ್ಕೆ ಮಾಡಲಾಗಿತ್ತು.

ಕೋವಿಂದ್ ಅವರು ಪರಿಶಿಷ್ಟ ಜಾತಿಯ ಕೋಲಿ ಸಮುದಾಯಕ್ಕೆ ಸೇರಿದವರು. ಪ‍ರಿಶಿಷ್ಟ ಪಂಗಡಕ್ಕೆ ಸೇರಿದವರು ಈವರೆಗೆ ರಾಷ್ಟ್ರಪತಿ ಹುದ್ದೆಗೆ ಏರಿಲ್ಲ. ಈ ಬಾರಿ ಅಂತಹ ಅವಕಾಶವೊಂದನ್ನು ಬಿಜೆಪಿ ಕೊಟ್ಟಿದೆ ಎಂಬುದು ರಾಜಕೀಯವಾಗಿ ಲಾಭದಾಯಕವೇ ಆಗಿದೆ.
ಜಾರ್ಖಂಡ್‌ ವಿಧಾನಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಜಾರ್ಖಂಡ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ 26ಕ್ಕೂ ಹೆಚ್ಚು. ಹಾಗೆಯೇ ಒಡಿಶಾದಲ್ಲಿಯೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ 17ಕ್ಕೂ ಹೆಚ್ಚು ಇದೆ. ಮುರ್ಮು ಅವರು ಪರಿಶಿಷ್ಟ ಪಂಗಡದವರು ಮತ್ತು ಎರಡೂ ರಾಜ್ಯಗಳ ಜತೆಗೆ ನಂಟು ಇರುವವರು ಎಂಬುದು ರಾಜಕೀಯವಾಗಿ ಲಾಭ ತಂದುಕೊಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...