ಕೋವಿಡ್ ಸಾಂಕ್ರಾಮಿಕದ ಹಾಗೂ ನೀಲಗಿರಿ ಬೆಳೆಯ ನಿಷೇಧದ ನಡುವೆಯೂ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಲಾಭದತ್ತ ಸಾಗುತ್ತಿದ್ದು, ಇದಕ್ಕೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ಹಲವಾರು ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ತಿಳಿಸಿದರು.
ಬೆಂಗಳೂರಿನಲ್ಲಿರುವ ನಿಗಮದ ಪ್ರಧಾನ ಕಚೇರಿ ವನವಿಕಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
2021 ರ ಜನವರಿಯಲ್ಲಿ ನಾನು ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಸಂಧರ್ಭದಲ್ಲಿ ಹಲವಾರು ಕಾರಣಗಳಿಂದ ನಿಗಮ ನಷ್ಟದತ್ತ ಸಾಗುತ್ತಿತ್ತು. 2017ರಲ್ಲಿ ನೀಲಗಿರಿ ನಿಷೇಧದ ನಂತರ ನಿಗಮ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಾ ಬಂದಿತು. ಬ್ಯಾಂಕುಗಳಲ್ಲಿದ್ದ ಠೇವಣಿಯನ್ನು ಹಿಂಪಡೆದು ನಿಗಮವನ್ನು ನಿರ್ವಹಿಸಬೇಕಾಗಿದ್ದ ಪರಿಸ್ಥಿತಿ ಬಂದೊದಗಿತ್ತು. ನಿಶ್ವಿತ ಠೇವಣಿಯು 67.35 ಕೋಟಿ ರೂಪಾಯಿಗಳಿಗೆ ಇಳಿದಿತ್ತು. ಇಂತಹ ಸಂಕಷ್ಟದ ಸಮಯವನ್ನು ಸವಾಲಾಗಿ ತಗೆದುಕೊಂಡು ಹಲವಾರು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು ಎಂದು ತಿಳಿಸಿದರು.
ನಿಮಗದ ಅಧೀನದಲ್ಲಿರುವ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿದ ನಂತರ ಕಾರ್ಯಕ್ಷಮತೆಯಲ್ಲಿ ಹಲವಾರು ಬದಲಾವಣೆಗಳನ್ನು ಅನುಷ್ಠಾನಗೊಳಿಸಲಾಯಿತು. ಇದರಿಂದಾಗಿ ನಿಗಮ ಲಾಭದತ್ತ ದಾಪುಗಾಲು ಹಾಕುತ್ತಿದೆ. ಸರಕಾರದ ಯಾವುದೇ ಅನುದಾನವಿಲ್ಲದೆ, ಒಂದುವರೆ ವರ್ಷದಲ್ಲಿ ನಿಶ್ಚಿತ ಠೇವಣಿ 100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ನಿಶ್ಚಿತ ಠೇವಣಿಯನ್ನು ಹಿಂದಕ್ಕೆ ತಗೆದುಕೊಳ್ಳಬಾರದು ಎನ್ನುವ ನಿರ್ಧಾರವನ್ನು ಮಂಡಳಿಯಲ್ಲಿ ತಗೆದುಕೊಂಡಿದ್ದೇವೆ ಎಂದು ತಾರ ಅನೂರಾಧ ಹೇಳಿದರು.
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮಕ್ಕೆ ಸೇರಿದ ಅರಣ್ಯ ಪ್ರದೇಶ ಒತ್ತುವರಿ ಆಗದಂತೆ ರಕ್ಷಿಸುವುದು ಮತ್ತು ಒತ್ತುವರಿ ತಡೆಗಟ್ಟುವುದರ ಕುರಿತು ಹಲವಾರು ಸಭೆಗಳನ್ನು ನಡೆಸಿದ್ದು, ಈ ಬಗ್ಗೆ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದೇವೆ. ಇದೇ ವೇಳೆ ನೀಲಗಿರಿ ನಿಷೇಧದ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೂತನ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ತಿಳಿಸಿದರು.