ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿ, ನಾಡನ್ನು ಸರ್ವ ಜನಾಂಗದ ಶಾಂತಿ ತೋಟವಾಗಿ ಮರು ಸ್ಥಾಪಿಸುವಂತೆ ಒತ್ತಾಯಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಗಣ್ಯರು ಪತ್ರ ಬರೆದಿದ್ದಾರೆ.
ಕೋಮು ಸೌಹಾರ್ದತೆಯ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಭವ್ಯ ಪರಂಪರೆಯಿದೆ. 1956 ರಲ್ಲಿ ಕರ್ನಾಟಕ ಏಕೀಕರಣವಾಯಿತು. ಆದರೆ ಕರ್ನಾಟಕದ ಮತೀಯ ಸೌಹಾರ್ದೆಯ ಇತಿಹಾಸ ಇದಕ್ಕಿಂತಲೂ ಹಳೆಯದು, 12 ನೇ ಶತಮಾನದಲ್ಲಿಯೇ ಕವಿ-ದಾರ್ಶನಿಕ ಬಸವಣ್ಣನವರ ಪ್ರಯತ್ನಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯಲ್ಲಿ ನಮ್ಮ ಕನ್ನಡ ನಾಡು ಸೌಹಾರ್ದೆಯ ಇತಿಹಾಸವನ್ನು ನಿರ್ಮಿಸಿದೆ.
ಸಮ್ಮಿಶ್ರ ಸಂಪ್ರದಾಯಗಳಿಗೆ ಹಿಂದು-ಮುಸ್ಲಿಂರನ್ನು ಒಳಗೊಂಡಂತೆ ಜನಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆಗೆ ನಮ್ಮ ನಾಡಿನ ಇತಿಹಾಸ ಸಾಕ್ಷಿಯಾಗಿದೆ. ಈ ಭವಯ ಪರಂಪರೆಯ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರಕವಿ ಕುವೆಂಪು ಅವರು ನೂರು ವರ್ಷಗಳಷ್ಟು ಹಿಂದೆಯೇ ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ ಎಂದಿದ್ದಾರೆ.
ಶಾಂತಿ, ಸಹಬಾಳ್ವೆ, ವೈವಿದ್ಯತೆ, ಬಹುತ್ವಕ್ಕೆ ಹಸರಾಗಿದ್ದ ಈ ನಾಡಿನಲ್ಲಿ ಇವುಗಳನ್ನೆಲ್ಲ ನಾಶಗೊಳಿಸುವಂತಹ ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಲಕ್ಷಾಂತರ ನಾಗರಿಕರಂತೆ ನಾವೂ ಸಹ ತೀವ್ರವಾಗಿ ವ್ಯಾಕುಲಗೊಂಡಿದ್ದೇವೆ. ಇಂಥ ತಪ್ಪು ನಡೆಗಳನ್ನು ಸರಿಪಡಿಸಲು ಈಗಲೂ ಅವಕಾಶವಿದ್ದು, ಅದಕ್ಕೆ ಅಗತ್ಯವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ನಾಗರಿಕರಾದ ನಮ್ಮ ಕರ್ತವ್ಯವೆಂದು ಭಾವಿಸಿ ಪತ್ರ ಬರೆಯುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.
ಸಂಕುಚಿತ ಮತೀಯವಾದಿಗಳು ಹಾಗೂ ದ್ವೇಷಪೂರಿತ ಕೆಲ ವ್ಯಕ್ತಿಗಳು ಮತ್ತು ಗುಂಪುಗಳು ಧರ್ಮ ಮತ್ತು ಜಾತೀಯ ಆಧಾರದಲ್ಲಿ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ದೂರವಿಡುವ ಹಾಗೂ ಅವರನ್ನು ದಮನಗೊಳಿಸುವ ಕೃತ್ಯಗಳಲ್ಲಿ ತೊಡಗಿರುವುದು ಆತಂಕದ ವಿಷಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.