ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಮಾದರಿ ಜಾರಿಗೊಳಿಸೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು – 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಆರೋಗ್ಯ ಸಂಜೀವಿನ ಯೋಜನೆಗೆ ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆ ಕೊಟ್ಟಿದ್ದೇವೆ. ಆದಷ್ಟು ಬೇಗ ಆ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ನಿಮ್ಮ ಆರೋಗ್ಯ ಮುಖ್ಯ. ಸರ್ಕಾರಿ ನೌಕರರ ಆರೋಗ್ಯ ಚೆನ್ನಾಗಿದ್ದರೇ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ನಾವು ಅನೇಕ ಯೋಜನೆ ಮಾಡುತ್ತೇವೆ. ಬಜೆಟ್ ಗಳನ್ನು ಮಾಡಿರುತ್ತೇವೆ. ಕಟ್ಟ ಕಡೆಯ ಬಡವರು, ದೀನ, ದಲಿತರಿಗೆ, ರೈತರು, ಮಹಿಳೆಯರಿಗೆ ಆ ಎಲ್ಲಾ ಸೌಲಭ್ಯ ತಲುಪಬೇಕಾದರೆ ಸರ್ಕಾರಿ ನೌಕರರ ಸೇವೆ ಮುಖ್ಯವಾಗಿದೆ. ನಿಮ್ಮ ಶ್ರಮ ಆ ಬಡವರಿಗೆ ಮುಟ್ಟಿದರೆ, ಕೇವಲ ನಿಮಗೆ ನಿಮ್ಮ ನೌಕರಿಯಿಂದ ಒಳ್ಳೆಯ ಹೆಸರು ಬರೋದಲ್ಲ. ಪುಣ್ಯ ಪ್ರಾಪ್ತಿ ಕೂಡ ಆಗಲಿದೆ. ನಿಮ್ಮ ಸೇವೆ ಪ್ರಾಮಾಣಿಕವಾಗಿರಲಿ ಎಂದು ತಿಳಿಸಿದ್ದಾರೆ.