ಬ್ರಿಟನ್ ಮತ್ತು ದಾವೋಸ್ ಪ್ರವಾಸ ಯಶಸ್ವಿಯಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪಾಲುದಾರಿಕೆ ವಹಿಸಲು ಹಲವು ರಾಷ್ಟ್ರಗಳು ಆಸಕ್ತಿ ತೋರಿವೆ ಎಂದು ತಿಳಿದುಬಂದಿದೆ.
ಜೂನ್ 9ರಂದು ಬ್ರಿಟನ್ ನ 20 ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ ಕರ್ನಾಟಕಕ್ಕೆ ಬರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಚಾಲನೆ ನೀಡುವುದು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಯುನೈಟೆಡ್ ಕಿಂಗ್ಡಂನ 20 ಕುಲಪತಿಗಳ ತಂಡವು ಜೂನ್ 9 ಮತ್ತು 10ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಿದರು.
ಆ ದೇಶದಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಶೈಕ್ಷಣಿಕ ಸಮಾವೇಶ ಮತ್ತು ವರ್ಲ್ಡ್ ಎಜುಕೇಷನ್ ಫೋರಂ (ಡಬ್ಲ್ಯುಇಎಫ್) ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ್ದ ಸಚಿವರು, ಅಲ್ಲಿನ ಫಲಶ್ರುತಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.