ಕಾಂಗ್ರೆಸ್ ಪಕ್ಷ ಸಾಮಾನ್ಯ ಜನತೆಯೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಿದೆ ಎಂದು ಭಾವಿಸಿದ್ದೇನೆ. ಇದನ್ನು ಸರಿಪಡಿಸಲು ತಾವೇ ಜನ ಬಳಿ ತೆರಳಬೇಕು. ಇದಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಾಯಾತ್ರೆ ಕೈಗೊಳ್ಳುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನವಸಂಕಲ್ಪ ಶಿಬಿರದಲ್ಲಿ ರಾಹುಲ್ ಗಾಂಧಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ವಿಚಾರಗಳನ್ನು ಬಿಟ್ಟುಕೊಡುತ್ತಿರುವುದರಿಂದ ಎದುರಾಳಿ ಪಕ್ಷಗಳಿಂದ ದಾಳಿಗೆ ಒಳಗಾಗುತ್ತಿದೆ. ಅಲ್ಲದೆ ಸಾಮಾನ್ಯ ಜನರ ಜೊತೆಗೆ ಸಂಪರ್ಕ ಕಳೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಒಪ್ಪಿಕೊಂಡಿದ್ದಾರೆ.
ಜನ ಸಾಮಾನ್ಯರ ಜೊತೆಗೆ ನಮ್ಮ ಸಂಪರ್ಕ ಕಡಿತಗೊಂಡಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಹಾಗೂ ಅದನ್ನು ಪುನಃ ಮರು ಜೋಡಿಸಲು ಕಠಿಣ ಪರಿಶ್ರಮ ಪಡಬೇಕು. ಜನರಿಗೆ ಕಾಂಗ್ರೆಸ್ ಪಕ್ಷ ದೇಶವನ್ನು ಮುನ್ನಡೆಸಬಲ್ಲದು ಎನ್ನುವುದು ಗೊತ್ತಿದೆ ಎಂದು 400 ಕ್ಕೂ ಹೆಚ್ಚಿದ್ದ ಕಾರ್ಯಕರ್ತರ ಮುಂದೆ ರಾಹುಲ್ ತಿಳಿಸಿದರು.
ಇನ್ನು ಜನರ ಜೊತೆ ಸಂಪರ್ಕ ಸಾಧಿಸಲು ಯಾವುದೇ ಅಡ್ಡದಾರಿ ಇಲ್ಲ. ಪಕ್ಷ ಅದನ್ನು ಬೆವರು ಹರಿಸಿ ಸಂಪಾದಿಸಬೇಕು. ಇದಕ್ಕಾಗಿ ರೈತರು ಮತ್ತು ಕೂಲಿ ಕಾರ್ಮಿಕರ ಜೊತೆ ಒಂದೆರಡು ದಿನಗಳಲ್ಲ, ತಿಂಗಳ ಕಾಲ ಕಳೆಯಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮನವಿ ಮಾಡಿದರು.
ತಾವೂ ಕೂಡ ಜೊತೆಗೂಡಿ ಬಿಜೆಪಿ ವಿರುದ್ಧ ಹೋರಾಟ ನಡೆಸುವುದಾಗಿ ಸದಸ್ಯರಿಗೆ ಭರವಸೆ ನೀಡಿದರು.
ಕಾಂಗ್ರೆಸ್ ದೇಶದ ಅಸಾಧಾರಣ ಮತ್ತು ಪ್ರಾಥಮಿಕ ರಾಷ್ಟ್ರೀಯ ವಿರೋಧ ಪಕ್ಷವಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದ ರಾಹುಲ್, ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ನಂತೆ ಹೋರಾಡಲು ಸಾಧ್ಯವಿಲ್ಲ, ಏಕೆಂದರೆ ಇದು ಸಿದ್ಧಾಂತಗಳ ಹೋರಾಟವಾಗಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಬಗ್ಗೆ ಮಾತನಾಡುತ್ತದೆ ಹೊರತು ಪ್ರಾದೇಶಿಕ ಪಕ್ಷಗಳ ಬಗ್ಗೆ ಅಲ್ಲ. ಏಕೆಂದರೆ ಅವುಗಳು ಸಿದ್ಧಾಂತವನ್ನು ಹೊಂದಿಲ್ಲದ ಕಾರಣ ಅವರನ್ನು ಸೋಲಿಸಲು ಸಾಧ್ಯವಿಲ್ಲ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.
ಪಕ್ಷದ ಕಾರ್ಯತಂತ್ರದ ಬಗ್ಗೆ ಮಾತನಾಡಿದ ಗಾಂಧಿ, ಬಿಜೆಪಿ ನಮಗಿಂತಲೂ ಉತ್ತಮವಾದ ಕ್ಷೇತ್ರವನ್ನು ಹೊಂದಿದೆ ಎಂದರೆ ಅದು ಸಂವಹನ ಕ್ಷೇತ್ರ. ಬಿಜೆಪಿ ಬಳಿ ಸಾಕಷ್ಟು ಹಣವಿದ್ದು, ಜನರೊಂದಿಗೆ ಉತ್ತಮ ಸಂವಹನ ಸಾಧಿಸುತ್ತಿದೆ. ನಾವು ನಮ್ಮ ಸಂವಹನವನ್ನು ಸುಧಾರಿಸಬೇಕು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.