ದೇಶದಲ್ಲಿ ಅಘೋಷಿತ ತುರ್ತು ಸ್ಥಿತಿ ನಿರ್ಮಾಣವಾಗಿದೆ. ಸತ್ಯ ಹೇಳಿದವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಹೀಗಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವಂತಾಗಿದೆ. ಈಗಲಾದರೂ ಧ್ವನಿಯೆತ್ತದಿದ್ದರೆ ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಲಿದೆ ಎಂದು ಸಾಹಿತಿ ಕುಂ.
ವೀರಭದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಈ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಹೈಟೆಕ್ ಸ್ವಾಮಿಗಳ ಸಂಖ್ಯೆ ಹೆಚ್ಚಾಗಿದೆ. ಇಂಥವರ ಕಾಲಿಗೆ ಬೀಳುವ ರಾಜಕಾರಣಿಗಳಿಗಿಂತ ಮೂರ್ಖರು ಬೇರೆ ಯಾರಿಲ್ಲ ಎಂದು ಹೇಳಿದ ಅವರು, ಪುರೋಹಿತರು ಜನರನ್ನು ಭಯಾನಕ ಪರಿಸ್ಥಿತಿ ಇಟ್ಟಿದ್ದಾರೆ. ಮೂಢನಂಬಿಕೆ ಸಹ ಬೇರೂರಿದ್ದು ಮಕ್ಕಳಿಗೆ ಹೆಸರಿಡುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ ಎಂದು ಕುಂ. ವೀರಭದ್ರಪ್ಪ ವಿಷಾದ ವ್ಯಕ್ತಪಡಿಸಿದರು.
ಸತ್ಯ ಹೇಳಿದ ಕಾರಣಕ್ಕಾಗಿಯೇ ಸಂಶೋಧಕ ಎಂಎಂ ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಯಿತು ಎಂದು ಕುಂ. ವೀರಭದ್ರಪ್ಪ ತಿಳಿಸಿದ್ದಾರೆ.