Wednesday, October 2, 2024
Wednesday, October 2, 2024

ಬಹುಮುಖಿ ಚಿಂತನೆಗಳ ವಿದ್ವಾಂಸ ಡಾ.ತೀ.ನಂ.ಶಂಕರನಾರಾಯಣ

Date:

ಜಾನಪದ ವಿದ್ವಾಂಸರೂ, ಸಂಶೋಧಕರೂ ಆದ ಡಾ. ತಿ. ನಂ. ಶಂಕರನಾರಾಯಣ ಅವರು 11.05.2022ರಂದು ನಿಧನರಾಗಿದ್ದಾರೆ.

ತೀ. ನಂ. ಶಂಕರನಾರಾಯಣರವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ 1947ರ ಸಪ್ಟೆಂಬರ್ 27ರಂದು ಜನಿಸಿದರು. ತಂದೆ ಟಿ.ಎಸ್.ನಂಜುಂಡಯ್ಯ. ತಾಯಿ ಸತ್ಯಭಾಮಮ್ಮ. ಪ್ರಾರಂಭಿಕ ಶಿಕ್ಷಣ ತೀರ್ಥಪುರದಲ್ಲಿ, ಮಾಧ್ಯಮಿಕ ಶಿಕ್ಷಣ ಶೆಟ್ಟಿಕೆರೆಗಳಲ್ಲಿ ನಡೆಯಿತು. ಮುಂದೆ ಮೈಸೂರಿನ ಶಾರದಾವಿಲಾಸ ಪ್ರೌಢಶಾಲೆ ಹಾಗೂ ಮಹಾಜನ ಪ್ರೌಢಶಾಲೆಗಳಲ್ಲಿ ಓದಿದರು. ವಿಜ್ಞಾನ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳಿಸಿದ್ದರೂ ಕನ್ನಡದ ಮೇಲಿನ ಪ್ರೀತಿಯಿಂದ ಬಿ.ಎ. ಸೇರಿದರು. ಇವರ ಸಂಬಂಧಿಗಳಾದ ಮಹಾನ್ ಸಾಹಿತಿಗಳಾದ ತೀ.ನಂ.ಶ್ರೀ ಅವರ ಮನೆಯಲ್ಲಿದ್ದ ಸಾಹಿತ್ಯಿಕ ಪರಿಸರ ಇವರನ್ನು ಅಪಾರವಾಗಿ ಪ್ರಭಾವಿಸಿತ್ತು. ಮಾಸ್ತಿ, ಡಿ.ವಿ.ಜಿ., ಬೇಂದ್ರೆ, ಪು.ತಿ.ನ, ಎ.ಎನ್. ಮೂರ್ತಿರಾವ್, ಡಿ.ಎಲ್.ಎನ್ ಮುಂತಾದವರುಗಳ ಸಮಾವೇಶ ಹಾಗೂ ಅವರ ಶಿಷ್ಯರಾಗಿದ್ದ ಹಾ.ಮಾ.ನಾ, ಎಚ್. ಎಂ. ಶಂಕರನಾರಾಯಣರಾಯರು, ಪರಮೇಶ್ವರ ಭಟ್ಟರು ಮುಂತಾದವರುಗಳ ಮಾತುಗಳನ್ನು ಕೇಳುವ ಅವಕಾಶ ಇವರಿಗೆ ಲಭಿಸಿತ್ತು.

ಆರನೆಯ ರ‍್ಯಾಂಕ್ ನೊಡನೆ ಬಿ.ಎ. ಪದವಿ ಹಾಗೂ ಎರಡನೆಯ ರ‍್ಯಾಂಕ್ ಸಾಧನೆಯಲ್ಲಿ ಎಂ.ಎ. ಪದವಿ ಗಳಿಸಿದರು.
ತೀರ್ಥಪುರ ಹಾಗೂ ಶೆಟ್ಟಿಕೆರೆ ಹಳ್ಳಿಗಳ ಗ್ರಾಮೀಣ ಅನುಭವ ಮತ್ತು ಮನೆಯಲ್ಲಿ ಅಜ್ಜಿ ವೆಂಕಟಲಕ್ಷಮ್ಮನವರು ಹೇಳುತ್ತಿದ್ದ ಜನಪದ ಕಥೆಗಳು ಮತ್ತು ಹಾಡುಗಳು ಹಾಗೂ ಎಂ.ಎ. ತರಗತಿಯಲ್ಲಿ ಪ್ರೊ. ಸುಜನಾ ಮತ್ತು ಜೀಶಂಪರವರ ಪಾಠ ಪ್ರವಚನಗಳಿಂದ ಪ್ರಭಾವಿತರಾಗಿ ‘ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗಳಿಸಿದರು.

ತೀ. ನಂ. ಶಂಕರನಾರಾಯಣ ಅವರು ಮೈಸೂರು ವಿ.ವಿ.ಯ ಸಂಜೆ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕರಾಗಿ ಸೇರಿ, ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟೆನ ಸ್ನಾತಕೋತ್ತರ ಕೇಂದ್ರದ ಸ್ಥಾಪಕ ಮುಖ್ಯಾಧಿಕಾರಿಯಾಗಿ, ಕುವೆಂಪು ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಭಾರತಿ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿ, ಕಲಾ ವಿಭಾಗದ ಡೀನ್ ಆಗಿ – ಹೀಗೆ ವಿವಿಧ ಹಂತಗಳಲ್ಲಿ ಕಾರ‍್ಯನಿರ್ವಹಿಸಿದ್ದಲ್ಲದೆ ಸ್ನಾತಕೋತ್ತರ ಪರೀಕ್ಷಾಮಂಡಳಿ, ಸ್ನಾತಕ ಕನ್ನಡ ಅಧ್ಯಯನ ಮಂಡಳಿ ಸ್ನಾತಕೋತ್ತರ ಕನ್ನಡ ಅಧ್ಯಯನ ಮಂಡಳಿ ಮುಂತಾದವುಗಳ ಅಧ್ಯಕ್ಷರಾಗಿ; ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ಹಲವಾರು ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕನ್ನಡ ಅಧ್ಯಯನ ಮಂಡಲಿಯ ಸದಸ್ಯರಾಗಿ ಕಾರ‍್ಯ ನಿರ್ವಹಿಸಿದ್ದರು.

ಶಂಕರನಾರಾಯಣ ಅವರು ಪರಿಸರ ವಿಜ್ಞಾನ, ಮನೋವಿಜ್ಞಾನ, ಮಾನವ ವಿಜ್ಞಾನ, ತೌಲನಿಕ ಸಾಹಿತ್ಯ, ಇತಿಹಾಸ, ರಾಜಕೀಯ ವಿಜ್ಞಾನ ಮುಂತಾದವುಗಳಲ್ಲಿ ಆಸಕ್ತರಾಗಿದ್ದು ಪದವಿ ತರಗತಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಕನ್ನಡ ಭಾಷೆ, ಸಂಸ್ಕ್ರತಿ, ಸಾಹಿತ್ಯ ವಿಮರ್ಶೆ, ತೌಲನಿಕ ಕಾವ್ಯ ಮೀಮಾಂಸೆ, ಛಂದಸ್ಸು,, ಜಾನಪದ ವಿಜ್ಞಾನ ಮುಂತಾದ ವಿಷಯಗಳನ್ನು ಬೋಧಿಸಿದ್ದರು.

ತೀ. ನಂ. ಶಂಕರನಾರಾಯಣ ಅವರು ಜಾನಪದ ಅಧ್ಯಯನ ಹಾಗೂ ಸಂಗ್ರಹ, ಸಂಶೋಧನಾ ಕಾರ‍್ಯವನ್ನೂ ಮುಂದುವರೆಸಿಕೊಂಡು ಬಂದು ಫಿನ್ ಲೆಂಡ್ ಜನಪದ ಮಹಾಕಾವ್ಯವಾದ ‘ಕಾಲೆವಾಲ’ ಮತ್ತು ಮಾನವ ಶಾಸ್ತ್ರದ ಅತಿ ಮಹತ್ವದ ಕೃತಿಯಾದ ಫ್ರೆಜರ್ ಅವರ ‘ಗೋಲ್ಡನ್ ಬೊ’ ಎಂಬ ಎರಡು ಮೌಲಿಕ ಕೃತಿಗಳನ್ನು ಪರಿಚಯ ಮಾಡಿಕೊಟ್ಟರು.

ಇವಲ್ಲದೆ ಜಾನಪದ ವಿಚಾರ, ಕಾಡು ಗೊಲ್ಲರು, ಕಾಡು ಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು, ಜಾನಪದ ಮಹಾ ಕಾವ್ಯ, ಜಾನಪದ ಸಂಗ್ರಹ -ಸಂಪಾದನೆ, ಫಿನ್ಲೆಂಡಿನ ಜಾನಪದ ವಿದ್ವಾಂಸರು ಮೊದಲಾದ ಕೃತಿಗಳನ್ನು ರಚಿಸಿದರು. ಇವುಗಳ ಜೊತೆಗೆ ಸಂಕೀರ್ಣ ಜಾನಪದ ಕಥೆಗಳು, ಜಾನಪದ ಕೈಪಿಡಿ, ಕರ್ನಾಟಕ ಜಾನಪದ ಮಹಾಕಾವ್ಯಗಳು, ಜನಪದ ಸಾಹಿತ್ಯ ಪ್ರಕಾರಗಳು, ಶ್ರೀಕಂಠ ತೀರ್ಥ (ತೀ.ನಂ.ಶ್ರೀ ಯವರಿಗೆ ಅರ್ಪಿಸಿದ ಸಂಸ್ಮರಣ ಗ್ರಂಥ), ಆಧುನಿಕತೆ ಮತ್ತು ಕನ್ನಡ ಸಾಹಿತ್ಯ, ಆಧುನಿಕತೆ ಮತ್ತು ಸಾಹಿತ್ಯ ಪ್ರಕಾರಗಳು ಮುಂತಾದವುಗಳನ್ನು ಸಂಪಾದಿಸಿದ್ದರು. ಇವರು ಇಂಗ್ಲಿಷಿನಲ್ಲಿ ರಚಿಸಿರುವ ಕೃತಿಗಳು ‘ದಿ ಎಪಿಕ್ ಆಫ್ ಜುಂಜಪ್ಪ’ , ‘ಟೆಕ್ಸ್ಟ್ ಅಂಡ್ ಪರ್ಫಾರ‍್ಮೆನ್ಸ್’ ಮುಂತಾದವು.

ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಕನ್ನಡ ಭಾರತಿಯಿಂದ ಇವರ ಪ್ರಧಾನ ಸಂಪಾದಕತ್ವದಲ್ಲಿ 50ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡವು. ಮನೋವೈಜ್ಞಾನಿಕ ಮತ್ತು ಜಾನಪದ, ಜಾನಪದ ವಿಜ್ಞಾನ, ಅಂತಾರಾಷ್ಟ್ರೀಯ ಜಾನಪದ ವಿಜ್ಞಾನದ ಸೈದ್ಧಾಂತಿಕ ವಿಷಯಗಳು- ಮುಂತಾದ ವಿಚಾರಗಳ ಬಗ್ಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳು, ಕಮ್ಮಟಗಳಲ್ಲಿ ಭಾಗಿಯಾಗಿದ್ದರು.

ತೀ. ನಂ. ಶಂಕರನಾರಾಯಣ ಅವರ ಜಾನಪದ ಸಂಶೋಧನೆ, ಸಾಹಿತ್ಯ ಕೃತಿ ರಚನೆಗಾಗಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ಜಾನಪದ ತಜ್ಙ ಪ್ರಶಸ್ತಿ, ಜಾನಪದ ಸಮೀಕ್ಷೆ – ವಿಶ್ಲೇಷಣೆ ಗ್ರಂಥಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕು.ಶಿ. ಹರಿದಾಸಭಟ್ ಸ್ಮಾರಕ ಪುಸ್ತಕ ಬಹುಮಾನ, ಫೋಕ್ಲೋರ್ ಮ್ಯೂಸಿಯಂ ಗೈಡ್ ಕೃತಿಗೆ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ ಮುಂತಾದವುಗಳಲ್ಲದೆ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದ ಮೊದಲ ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ 37ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿದ್ದವು.

ವಿದ್ಯಾರ್ಥಿಗಳು, ಅಭಿಮಾನಿಗಳು ಇವರಿಗೆ 2008ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಸಮನ್ವಯ’.

ಅಗಲಿದ ಚೇತನಕ್ಕೆ ನಮನ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...