ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡು ಪಂಚಾಯತ್ ನ ಸದಸ್ಯ ಕುರುಮನೆ ರಾಮಸ್ವಾಮಿ ಅವರ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇವೆ. ಎಲ್ಲ ಮನುಷ್ಯರ ಸಾವಿನ ಸುದ್ದಿಯಂತೆ ಅದೂ ಇತ್ತು. ಅವರ ಬಗ್ಗೆ ಬರೆಯುವಾಗ ಮಂಗನ ಕಾಯಿಲೆಯಿಂದ ಮೃತರಾದರು ಎಂಬ ಉಲ್ಲೇಖವಿತ್ತು. ಸಾಗರ ತಾಲೂಕಿನ ಈ ಪ್ರದೇಶದ ಸಮುದಾಯ ನಿತ್ಯ ಸೂರ್ಯೋದಯವನ್ನ ಒಂದು ಸವಾಲೆಂಬಂತೆ ಕಾಣುತ್ತಿದ್ದಾರೆ. ಇವತ್ತಾಯಿತು ನಾಳೆ ಏನೋ ಹೇಗೋ ? ಎಂಬ ಆತಂಕ ,ತಲ್ಲಣಗಳಿಂದ ಅವರ ಬದುಕು ಭರವಸೆ ಕಳೆದುಕೊಳ್ಳುತ್ತಿದೆ.
ಈಗಾಗಲೇ 1957 ರಿಂದ ಗುರುತಿಸಲ್ಪಟ್ಟ ಕಾಯಿಲೆ ಬಗ್ಗೆ ನಮ್ಮಲ್ಲಿ ಇನ್ನೂ ಸೂಕ್ತವಾದ ಲಸಿಕೆ ಕಂಡುಹಿಡಿದಿಲ್ಲ ಎಂದರೆ ಜನ ಏನೆಂದು ಯೋಚಿಸಬಹುದು!?.
ಕ್ಯಾಸನೂರು ಅರಣ್ಯ ಕಾಯಿಲೆ ಎಂಬ ಅಭಿದಾನವಿದೆ. ಇದು ವೈರಸ್ಸಿನ ಮೂಲಕ ಬರುವಂತಹ ಜಾಡ್ಯ. ಮಂಗಗಳ ಮೂಲಕ ಹರಡುವ ಈ ಕಾಯಿಲೆಗೆ ಮಂಗನ ಕಾಯಿಲೆ ಎಂಬ ಸ್ಥಳೀಯ ಹೆಸರಿನಿಂದ ಕರೆಯಲಾಗುತ್ತಿದೆ.

ಹಳ್ಳಿಯಲ್ಲಿ ,ಕಾಡಿನಲ್ಲಿ ಮಂಗನ ಸಾವಾಯಿತೆಂದರೆ ಮಂಗನ ಕಾಯಿಲೆಯೆಂದೇ ಗುಮಾನಿ ಗ್ಯಾರಂಟಿ.
ಈ ವೈರಸ್ ಸೈಬೀರಿಯಾದಿಂದ ವಲಸೆ ಬಂದ ಹಕ್ಕಿಗಳ ಮೂಲಕ ಇಲ್ಲಿ ಅರಣ್ಯಕ್ಕೆ ಪ್ರವೇವಾಗಿದೆ.ಇದೇ ತರಹ ವೈರಸ್ ಲಕ್ಷಣಗಳು ನಮ್ಮ ದೇಶದ ಇತರೆ ಭಾಗಗಳಲ್ಲೂ ಕಂಡು ಬಂದಿದೆ ಎಂದು ವೈದ್ಯ ವಿಜ್ಞಾನಿಗಳ ಅಭಿಪ್ರಾಯ. 2022-23 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 33 ಪ್ರಕರಣಗಳು ದಾಖಲೆಯಾಗಿವೆ.ಅದರಲ್ಲಿ ಒಂದು ಸಾವಾಗಿದೆ.ಹೀಗೇ ಉತ್ತರ ಕನ್ನಡ ಜಿಲ್ಲೆಯಲ್ಲಿ 13ಪ್ರಕರಣ. ಒಂದು ಮರಣ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು, ಲೇಖನಗಳು ಪದೇಪದೆ ಕಾಣಿಸಿಕೊಳ್ಳುತ್ತಿವೆ. ( ಶ್ರೀ ಸಂತೋಷ ಕಾಚಿನ ಕಟ್ಟೆ ,ವಿಜಯ ಕರ್ನಾಟಕ , ತಾ. 5-5-22). ಕೋವಿಡ್ ನಂತಹ ಮಹಾಮಾರಿಯನ್ನೇ ಎದುರಿಸಿದ ಭಾರತಕ್ಕೆ ಮಂಗನಕಾಯಿಲೆ ಒಂದು ಸವಾಲೇ ಅಲ್ಲ. ಇಲ್ಲಿಯವರೆಗೂ ಕೋಟಿಗಟ್ಟಲೆ ಹಣದ ಯೋಜನೆ ರೂಪಿಸಿದರೂ ಮಂಗನ ಕಾಯಿಲೆ ಪರಿಣಾಮಕಾರಿ ನಿರ್ಮೂಲನೆ ಫಲಕಾರಿಯಾಗಿಲ್ಲ. ಈಗಿರುವ ಲಸಿಕೆಯ ಸಾಮರ್ಥ್ಯದ ಬಗ್ಗೆ ವೈದ್ಯರು ಭರವಸೆಯಿಂದಲೇ ಮಾತಾಡುತ್ತಾರೆ.ಪ್ರತೀ ವರ್ಷ ಲಸಿಕೆ ಹಾಕಿಸಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ.
ಒಂದು ಸಂಶೋಧನಾ ಕೇಂದ್ರ ಮಂಜೂರಾಗಿದ್ದರೂ ಅಧಿಕಾರಿಗಳು ಅದನ್ನ ಸಾಗರದ ಸನಿಹ ಬೇಡ ಶಿವಮೊಗ್ಗದಲ್ಲಿರಲಿ ಎಂದು ಎನ್ನುತ್ತಾರಂತೆ. ಹೀಗಾಗಿ ಅದಕ್ಕೂ ಮುಹೂರ್ತ ಕೂಡಿಬಂದಿಲ್ಲ. ಹೋಗಲಿ ಗ್ರಾಮಗಳ ಸ್ಥಳಾಂತರ ಆಲೋಚಿಸುತ್ತಾರೋ ಗೊತ್ತಿಲ್ಲ. ಜಲಾಶಯ ನಿರ್ಮಾಣವಾದಾಗ ಹಳ್ಳಿ ಬಿಟ್ಟು ಬಂದರು ನಮ್ಮ ಜನ. ಪ್ಲೇಗು ಮಾರಿ ಬಂದಾಗ ಜನ ಗುಳೆಹೋಗುತ್ತಿದ್ದರು. ಈ ಉದಾಹರಣೆ ನಮ್ಮ ಮುಂದಿದೆ. ಈಗ ಮಾರಣಾಂತಿಕ ಕಾಯಿಲೆಗೋಸ್ಕರ ಹೀಗೆ ಮಾಡಬಹುದೆ!? ಎಂಬುದು ಪ್ರಶ್ನೆ.
ಇಂತಹ ಕಾಯಿಲೆ ಒಬ್ಬ ಅಂತಾರಾಷ್ಟ್ರೀಯ ಸಿನೆಮಾ ತಾರೆಗೆ, ಪ್ರಭಾವೀ ರಾಜಕಾರಣಿಗೆ ಬಂದು ಅಸು ನೀಗಿದ್ದರೆ ಸರ್ಕಾರ,ಸಮಾಜ ಎಚ್ಚೆತ್ತುಕೊಳ್ಳತ್ತದೆ.
ಆದರೆ ಓರ್ವ ಗ್ರಾಮೀಣ ಮನುಷ್ಯ ಮರಣಿಸಿದರೆ ಅದು ಸುದ್ದಿಯಾಗುವುದಿಲ್ಲ. ಪ್ರಾಣದ ಬೆಲೆ ಎಲ್ಲ ಮನುಷ್ಯರದ್ದೂ ಒಂದೆ.
ಹೀಗೆ ಜಾಣಮೌನವಹಿಸಿದರೆ ಏನೂ ಸಾಧನೆಯಾಗುವುದಿಲ್ಲ.