ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಳಿಕ ಬ್ಯಾಂಕ್ ಸಾಲಗಾರರಿಗೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಮುಖ ಪಾಲಿಸಿ ದರ ಏರಿಕೆ ಘೋಷಿಸಿದೆ.
ಇದರಿಂದಾಗಿ ಎಲ್ಲ ರೀತಿಯ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದ್ದರೆ, ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ ಎಂದು ತಿಳಿದುಬಂದಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸಿದರು. ಯೂಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಬದಲಾದ ಜಾಗತಿಕ ಸನ್ನಿವೇಶ ಅರ್ಥ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪೂರೈಕೆ ಜಾಲದ ಮೇಲೆ ಅಡಚಣೆ ಉಂಟಾಗಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.
ಬಡ್ಡಿ ದರ ಕೆಳಗಿನ ಹಂತದಿಂದ ಯೂರ್ಟನ್ ತೆಗೆದುಕೊಂಡಾಗ ಸಾಮಾನ್ಯ ವಾಗಿ ಅಲ್ಪಾವಧಿ ಮತ್ತು ಮಧ್ಯಮಾವಧಿಯ ನಿಶ್ಚಿತ ಠೇವಣಿಗಳ ಬಡ್ಡಿದರ ಮೊದಲು ಏರಿಕೆಯಾಗುತ್ತದೆ. ದೀರ್ಘಾವಧಿ ನಿಶ್ಚಿತ ಠೇವಣಿ ಬಡ್ಡಿದರವು ಏರಿಕೆಯಾಗಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಹೀಗಾಗಿ ದೀರ್ಘಾವಧಿಯ ಠೇವಣಿಯಲ್ಲಿ ಹಣವನ್ನು ಕೂಡಿಡುವುದು ಸರಿಯಾದ ಕ್ರಮವಲ್ಲ. ಅದನ್ನು ನವೀಕರಿಸುವ ಸಮಯವಾಗಿದ್ದರೆ ಅಲ್ಪಾವಧಿಗೆ ಬದಲಾಯಿಸಲು ಇದು ಸರಿಯಾದ ಸಮಯ ಎನ್ನುತ್ತಾರೆ ಹೂಡಿಕೆ ಪರಿಣತರು.
ಆರ್ಬಿಐ ರೆಪೋ ದರ, ಸಿಆರ್ಆರ್ ಏರಿಕೆ ಪ್ರಕಟಿಸಿದ ಬೆನ್ನಿಗೆ ಬಿಎಸ್ಇ ಸೆನ್ಸೆಕ್ಸ್ 1,306.96 ಅಂಶ (2.29%) ಕುಸಿದು 55,669.03 ಅಂಶದಲ್ಲಿ, ಎನ್ಎಸ್ಇ ನಿಫ್ಟಿ 50 ಸೂಚ್ಯಂಕ 391.50 ಅಂಶ (2.29%) ಕುಸಿದು 16,677.60 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ.
ಆಟೋ, ಬ್ಯಾಂಕ್, ಎಎಂಸಿಜಿ, ಪವರ್, ಮೆಟಲ್, ರಿಯಾಲ್ಟಿ, ಹೆಲ್ತ್ಕೇರ್, ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ಕೂಡ ಶೇ.1&3ರ ತನಕ ಕುಸಿತ ಕಂಡಿವೆ. ಬಿಎಸ್ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ 6,27,359.72 ಕೋಟಿ ರೂ.ನಷ್ಟವಾಗಿದ್ದು 2,59,60,852.44 ಕೋಟಿ ರೂ.ಗೆ ತಲುಪಿದೆ ಎನ್ನಲಾಗಿದೆ.