ಕಾರ್ಪೊರೆಟ್ ಸಂಸ್ಥೆಗಳು ಹೊಸ ಅನ್ವೇಷಣೆಗಳು ಮತ್ತು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಾಲಕಾಲಕ್ಕೆ ಪರಿಚಯಿಸುತ್ತಿರಬೇಕು. ಇಲ್ಲವಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಅವುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಈ ರೀತಿಯ ಅನ್ವೇಷಣೆಗೆ ಒತ್ತು ನೀಡುವ ಸಂಸ್ಥೆಗಳ ಬಗ್ಗೆ ಹೂಡಿಕೆದಾರರು ಹೆಚ್ಚು ಗಮನಹರಿಸುವುದು ಸೂಕ್ತ ಎಂದು ಬೆಂಗಳೂರಿನ ಆನಂದ್ ರಾಠಿ ಸಂಸ್ಥೆಯ ವ್ಯವಸ್ಥಾಪಕ ರೆಹಮತ್ ಬೇಗ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ವಿಭಾಗವು ಬುಧವಾರದಂದು ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ “ಕ್ಯಾಪಿಟಲ್ ಮಾರ್ಕೆಟ್ ಡೈನಾಮಿಕ್ಸ್ ಮತ್ತು ಅವಕಾಶಗಳು” ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬಿಎಸ್‌ಇ ಮತ್ತು ಎನ್‌ಎಸ್‌ಇ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವಾಗ ಪ್ರಸಕ್ತ ವಿದ್ಯಮಾನಗಳು ಮತ್ತು ಜಾಗತಿಕ ಬೆಳವಣ ಗೆಗಳು ಸಂಸ್ಥೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅರಿತು ಹೂಡಿಕೆದಾರರು ಮುಂದಡಿಯಿಡಬೇಕು ಎಂದರು.
ಗ್ರಾಮೀಣ ಭಾಗದ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿರ್ವಹಣಾಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಗರ ಕೇಂದ್ರಿತ ಸಂಸ್ಥೆಗಳ ವಿದ್ಯಾರ್ಥಿಗಳಷ್ಟೇ ಬುದ್ಧಿಮತ್ತೆ, ಔದ್ಯೋಗಿಕ ಕೌಶಲ್ಯ ಹೊಂದಿದ್ದು, ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳುವುದರತ್ತ ಹೆಚ್ಚು ಗಮನಹರಿಸಿದರೆ, ಉದ್ಯಮದಲ್ಲಿ ಉತ್ತಮ ಅವಕಾಶ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಆನಂದ್ ರಾಠಿ ಸಂಸ್ಥೆಯಿಂದ ಮೌಖಿಕ ಪರೀಕ್ಷೆ ನಡೆಸಿ ವಿಭಾಗದ ಕೆಲವು ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಂದಿನ ಉದ್ಯೋಗ ಪ್ರಕ್ರಿಯೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ವಿಭಾಗದ ಅಧ್ಯಕ್ಷ ಪ್ರೊ. ಹೆಚ್. ಎನ್. ರಮೇಶ್, ಪ್ರೊ. ಹಿರೇಮಣ ನಾಯಕ್, ಡಾ. ಕೆ. ಆರ್. ಮಂಜುನಾಥ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.