ರಕ್ತದಾನ ಮಹಾದಾನ ಎಂದು ನಾವು ಕೇಳಿರುತ್ತೇವೆ. ಇಲ್ಲೊಬ್ಬ ವ್ಯಕ್ತಿ ರಕ್ತದಾನದ ಜಾಗೃತಿ ಮೂಡಿಸುವುದಕ್ಕೆ, ಪಾದಯಾತ್ರೆಯನ್ನು ಕಳೆದ 4ತಿಂಗಳಿನಿಂದ ಆರಂಭಿಸಿದ್ದಾನೆ.
ಈತ ದೆಹಲಿ ಮೂಲದ 37 ವರ್ಷದ ಕಿರಣ್ ವರ್ಮಾ. ಕೇರಳ ರಾಜಧಾನಿ ತಿರುವನಂತಪುರದಿಂದ ದೇಶದ ಅನೇಕ ರಾಜ್ಯಗಳಲ್ಲಿ ಸುತ್ತಾಡಿ ದೆಹಲಿ ತಲುಪುವ ಗುರಿ ಹೊಂದಿದುವ ಕಿರಣ್ ವರ್ಮಾ ನಿನ್ನೆ (ಸೋಮವಾರ) ಬೆಳಗಾವಿಗೆ ಆಗಮಿಸಿದ್ದಾರೆ.
2021ರ ಡಿಸೆಂಬರ್ 28 ರಂದು ತಿರುವನಂತಪುರಂನಿಂದ ಪಾದಯಾತ್ರೆ ಪ್ರಾರಂಭಿಸಿದ್ದರು. ಕಿರಣ್ ವರ್ಮಾ 3300 ಕಿಲೋಮೀಟರ್ ಸಂಚರಿಸಿ ಬೆಳಗಾವಿ ತಲುಪಿದ್ದಾರೆ.
2024ರ ಜೂನ್ 14ರ ವಿಶ್ವ ರಕ್ತದಾನ ದಿನದಂದು ದೆಹಲಿ ತಲುಪುವ ಗುರಿ ಹೊಂದಿರುವ ಕಿರಣ್ ವರ್ಮಾ ನಿತ್ಯ 30 ರಿಂದ 40 ಕಿಲೋಮೀಟರ್ ಸಂಚರಿಸುತ್ತಾರೆ. ಇದುವರೆಗೆ 3330 ಕಿಮೀ ನಡಿಗೆ ಪೂರ್ಣಗೊಳಿಸಿರುವ ಕಿರಣ್ ವರ್ಮಾ ಕೇರಳ, ಪಾಂಡಿಚೇರಿ, ಗೋವಾ, ತಮಿಳುನಾಡು, ಕರ್ನಾಟಕದ ವಿವಿಧ ನಗರಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ.
ಈಗಾಗಲೇ ಭೇಟಿಯಾದ ಕಡೆಗಳಲ್ಲಿ ಕಿರಣ್ ವರ್ಮಾ ನಡಿಗೆಯಿಂದ ಸ್ಪೂರ್ತಿಗೊಂಡು ವಿವಿಧೆಡೆ 26 ರಕ್ತದಾನ ಶಿಬಿರ ಆಯೋಜನೆ ಮಾಡಿ 2037 ಯೂಟಿನ್ ರಕ್ತ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ರಕ್ತದ ಕೊರತೆ ನೀಗಿಸಲು ಪ್ರೇರಣೆ ತುಂಬಲು ಏಕಾಂಗಿಯಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ನನ್ನ ಈ ಪಾದಯಾತ್ರೆಗೆ ಕುಟುಂಬಸ್ಥರು, ಸ್ನೇಹಿತರ ಪ್ರೋತ್ಸಾಹ ಇದೆ.ನನ್ನ ಪತ್ನಿ ಕೆಮಿಕಲ್ ಇಂಜಿನಿಯರ್ ಇದ್ದು ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ.ನಿತ್ಯದ ಖರ್ಚು ವೆಚ್ಚಕ್ಕೆ ಸ್ನೇಹಿತರು ಕುಟುಂಬಸ್ಥರು ಧನಸಹಾಯ ಮಾಡುತ್ತಿದ್ದಾರೆ. ಯಾವುದೇ ಸರ್ಕಾರದಿಂದ ನಾನು ನೆರವು ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಕೊರೋನಾ ಸಂಕಷ್ಟದಲ್ಲಿದ್ದಾಗ ಪ್ಲಾಸ್ಮಾ ಕೊರತೆ ಎದುರಾಗಿದ್ದು ಎಲ್ಲರಿಗೂ ಗೊತ್ತು. ದೇಶದಲ್ಲಿ 5 ಮಿಲಿಯನ್ ಯುವಕರು ರಕ್ತದಾನ ಮಾಡಿದ್ರೆ ರಕ್ತದ ಕೊರತೆಯಿಂದ ಯಾರೂ ಸಾಯಲ್ಲ ಅಂತಾರೆ ಕಿರಣ್ ವರ್ಮಾ. ಪಾದಯಾತ್ರೆ ವೇಳಡ ಆಯಾ ನಗರದ ಹೋಟೆಲ್‌ಗಳಲ್ಲಿ ಆಹಾರ ಸೇವಿಸಿ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡುತ್ತೇನೆ. ಕೆಲವೆಡೆ ತಮ್ಮ ಸ್ನೇಹಿತರು ಹಾಗೂ ಪಾದಯಾತ್ರೆ ವೇಳೆ ಪರಿಚಯವಾದವರು ಆಶ್ರಯ ನೀಡ್ತಾರೆ. ಬಸ್ ನಿಲ್ದಾಣಗಳಲ್ಲೂ ರಾತ್ರಿ ಕಳೆದಿದ್ದೇನೆ. ಕೆಲವೆಡೆ ನಾನು ಏಕಾಂಗಿಯಾಗಿ ಪಾದಯಾತ್ರೆ ಹೊರಟಾಗ ಕೆಲ ಪುಂಡರು ಹಲ್ಲೆ ಮಾಡಿ ಮೊಬೈಲ್ ವಾಚ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ತಮ್ಮ ಪಾದಯಾತ್ರೆ ಅನುಭವ ಮಾಧ್ಯಮಗಳ ಜೊತೆ ಕಿರಣ್ ವರ್ಮಾ ಹಂಚಿಕೊಂಡಿದ್ದಾರೆ.
ಇನ್ನು ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಖುಷಿ ಇದೆ. ರಕ್ತದಾನ ಮಾಡುವುದರಿಂದ ಆರೊಗ್ಯವಂತರಾಗಿಯೂ ಇರಬಹುದು, ಒಂದು ಜೀವ ಉಳಿಸಿದ ಸಾರ್ಥಕತೆಯೂ ಇರುತ್ತದೆ. ಹೀಗಾಗಿ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಅಂತಾ ಯುವಕರಲ್ಲಿ ಕಿರಣ್ ವರ್ಮಾ ಮನವಿ ಮಾಡಿದ್ದಾರೆ.