ಪೂರ್ವದ ಡಾನ್‌ಬಾಸ್ ಪ್ರಾಂತ್ಯದಲ್ಲಿ ರಷ್ಯಾ ತನ್ನ ತೀವ್ರ ದಾಳಿ ಆರಂಭಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ನಿನ್ನೆ ಮಾಹಿತಿ ನೀಡಿದ್ದಾರೆ.
ಡಾನ್‌ಬಾಸ್‌ಗಾಗಿ ರಷ್ಯಾ ಸೇನೆ ಯುದ್ಧ ಆರಂಭಿಸಿದೆ ಎಂದು ನಾವೀಗ ಖಚಿತಪಡಿಸಬಹುದಾಗಿದೆ. ಅದಕ್ಕಾಗಿ ಅವರು ದೀರ್ಘಕಾಲದಿಂದ ತಯಾರಿ ನಡೆಸಿದ್ದರು. ರಷ್ಯಾ ಸೇನೆಯ ಹೆಚ್ಚಿನ ಭಾಗವನ್ನು ಈ ಆಕ್ರಮಣಕ್ಕೆ ನಿಯೋಜಿಸಲಾಗಿದೆ ಎಂದು ಅವರು ಟೆಲಿಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ.
ರಷ್ಯಾ ಎಷ್ಟೇ ಸೈನಿಕರನ್ನು ಇಲ್ಲಿಗೆ ಕರೆತಂದರೂ, ನಾವು ಹೋರಾಡುತ್ತೇವೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ಪ್ರದೇಶಗಳಿಂದ ರಷ್ಯಾ ತನ್ನ ಸೇನೆಯನ್ನು ಹಿಂಪಡೆದ ನಂತರ ಈಗ ಡಾನ್‌ಬಾಸ್ ಪ್ರದೇಶದಲ್ಲಿ ಹೋರಾಟವನ್ನು ತೀವ್ರಗೊಳಿಸಿದೆ.
ರಷ್ಯಾ ಪರ ಪ್ರತ್ಯೇಕತಾವಾದಿಗಳು 2014ರಿಂದಲೂ ಈ ಪ್ರದೇಶವನ್ನು ಭಾಗಶಃ ಹಿಡಿತದಲ್ಲಿಟ್ಟುಕೊಂಡಿದ್ದಾರೆ.
ಝೆಲೆನ್‌ಸ್ಕಿ ಭಾಷಣಕ್ಕೂ ಸ್ವಲ್ಪಹೊತ್ತಿಗೆ ಮೊದಲು, ಪೂರ್ವ ಲುಗಾನ್‌ಸ್ಕ್ ಪ್ರಾಂತ್ಯದ ಗವರ್ನರ್ ಸೆರ್ಗಿವ್ ಗಾಯ್ಡೆ ಕೂಡ, ಬಹು ನಿರೀಕ್ಷಿತ ದಾಳಿಯನ್ನು ರಷ್ಯಾ ಪ್ರಾರಂಭಿಸಿದೆ ಎಂದು ಘೋಷಿಸಿದ್ದರು. ಇದು ಕ್ರೂರವಾಗಿದೆ. ನಾವು ವಾರದ ಹಿಂದಿನಿಂದಲೂ ಹೇಳುತ್ತಿದ್ದಂತೆಯೇ ಈಗ ಆಕ್ರಮಣ ಆರಂಭವಾಗಿದೆ ಎಂದು ಸೆರ್ಗಿವ್ ಫೇಸ್‌ಬುಕ್ ಮೂಲಕ ಮಾಹಿತಿ ತಿಳಿಸಿದ್ದರು.
ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ ರಷ್ಯಾ ನಡೆಸಿದ ಶೆಲ್ ದಾಳಿಯಿಂದಾಗಿ ನಿನ್ನೆ ಪೂರ್ವ ಉಕ್ರೇನ್‌ನಲ್ಲಿ ಕನಿಷ್ಠ 8 ನಾಗರಿಕರು ಸಾವನ್ನಪ್ಪಿದ್ದಾರೆ.
ಕ್ರೆಮಿನ್ನಾ ನಗರದಿಂದ ಹೊರಹೋಗಲು ಪ್ರಯತ್ನಿಸಿದ್ದ ನಾಲ್ವರು ಹಾಗೂ ನೆರೆಯ ಡೊನೆಟ್ಸ್ಕ್ ಪ್ರಾಂತ್ಯದಲ್ಲಿ ಇತರ 4 ಮಂದಿ ಮೃತಪಟ್ಟಿದ್ದಾರೆ.
ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾ ಭಾರಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಉಕ್ರೇನ್ ಸೇನೆ ಈ ಮುಂಚೆಯೇ ಅಂದಾಜಿಸಿತ್ತು.
ಅಮೆರಿಕ ಮತ್ತು ನ್ಯಾಟೊ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ರಷ್ಯಾ ಫೆಬ್ರವರಿ 25ರಂದು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇದಕ್ಕೂ ಸ್ವಲ್ಪ ಸಮಯದ ಮುಂಚೆ ಡೊನೆಟ್ಸ್ಕ್ ಮತ್ತು ಲುಗಾನ್‌ಸ್ಕ್ ಪ್ರಾಂತ್ಯಗಳು ಪ್ರತ್ಯೇಕವಾದಿಗಳ ಸ್ವತಂತ್ರ್ಯ ಪ್ರದೇಶಗಳೆಂದು ರಷ್ಯಾ ಅಧ್ಯಕ್ಷ ಪುಟಿನ್ ಅವರು ಘೋಷಿಸಿದ್ದರು.