ಜಾನಪದ ಪ್ರತಿಯೊಬ್ಬರ ಬದುಕಿಗೂ ಶೋಭೆ ತರುವ ಕಲಾ ಪ್ರಕಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹು ಮಾಧ್ಯಮಗಳ ಕಾರಣಕ್ಕೆ ಈ ಕಲೆ ನಶಿಸುತ್ತಿದೆ. ಅನಾದಿ ಕಾಲದ ಇತಿಹಾಸ ಹೇಳುವ ಈ ಕಲಾಪ್ರಕಾರದ ಬಗ್ಗೆ ಯುವ ತಲೆಮಾರಿನವರಲ್ಲಿ ಆಸಕ್ತಿ ಬೆಳೆಸಿದರೆ ಮಾತ್ರ ಅದು ಉಳಿಯಬಲ್ಲದು ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ಅವರು ಹೇಳಿದರು.
ಸಾಗರ ಸಮೀಪದ ಸಿರಿಮಂತ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಿರಿವಂತೆ ಗ್ರಾಮ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಳಗುಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಯಿಂದ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಎರಡನೇ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಬದುಕು ಹಾಗೂ ಜಾನಪದ ಸಾಹಿತ್ಯ ಮತ್ತು ಕಲೆಯ ನಡುವೆ ಅವಿನಾಭಾವ ಸಂಬಂಧವಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್,
ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯ ರಾಯಭಾರಿಗಳಿದ್ದಂತೆ. ಈ ಕಲಾವಿದರನ್ನು ಭಿಕ್ಷುಕರಂತೆ ಕಾಣುವ ಪ್ರವೃತ್ತಿ ಕೊನೆಯಾಗಬೇಕು. ಜಾನಪದ ಕಲಾವಿದರಿಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿ ಇದೆ ಎಂದರು.
ಜಾನಪದವು ನಮ್ಮ ಸಂಸ್ಕೃತಿಯ ತಾಯಿಬೇರು. ಜಾನಪದ ಎಂಬುವುದೇ ಒಂದು ಸಂಭ್ರಮ ಎಂಬುದನ್ನು ನಾವು ಮರೆಯಬಾರದು. ಸರ್ಕಾರದ ನೆರವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಜಾನಪದ ಪ್ರಕಾರದ ಪಾಲಿಗೆ ಆಶಾದಾಯಕ ಬೆಳವಣಿಗೆ ಎಂದರು.
ಸಮ್ಮೇಳನದ ಅಧ್ಯಕ್ಷ ಡೊಳ್ಳು ಕುಣಿತದ ಕಲಾವಿದ ಶಿಕಾರಿಪುರದ ಡೊಂಬರ ಹುಚ್ಚಪ್ಪ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಜೊತೆಗೆ ಎಲ್ಲ ಸಂಘ ಸಂಸ್ಥೆಗಳ ಮೇಲೆ ಇದೆ. ಪ್ರತಿಯೊಬ್ಬರು ಈ ಕಲೆಗಳ ಬಗ್ಗೆ ಆಸಕ್ತಿ ತೋರಿದರೆ ಮಾತ್ರ ಕಲೆ ಬೆಳೆಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಲೇಖಕ ವಿ. ಗಣೇಶ್ ಅವರ ಜಾನಪದ ಕಥೆಗಳು ಕೃತಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಬಿಡುಗಡೆ ಮಾಡಿದರು.
ಹೆಗಡೆಮನೆ ಯೋಗೀಶ್, ಗಣಪತಿ ನಾಯ್ಕ್ ಸಿರಿವಂತೆ, ದೇವೇಂದ್ರ ಬೆಳೆಯೂರು, ನಾಗಮ್ಮ ಆನಂದಪುರ, ಶ್ರೀನಿವಾಸರಾವ್, ಲಕ್ಷ್ಮಣ ಕುಗ್ವೆ , ರಾಜು ಜನ್ನೆಹಕ್ಲು ಇವರಿಗೆ ಜಿಲ್ಲಾಮಟ್ಟದ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಜಾನಪದ ವಿದ್ವಾಂಸ ದೇವೇಂದ್ರ ಬೆಳೆಯೂರು ಶಿವಮೊಗ್ಗ ಜಿಲ್ಲೆಯಲ್ಲಿರುವಷ್ಟು ಜಾನಪದ ವೈವಿಧ್ಯ ರಾಜ್ಯದ ಇತರ ಭಾಗಗಳಲ್ಲಿ ಇಲ್ಲ. ದೊಡ್ಡಾಟ, ಸಣ್ಣಾಟ, ಪ್ರಕಾರಕ್ಕೆ ಸಿಗಬೇಕಾದ ಮಾನ್ಯತೆ ದೊರೆತಿಲ್ಲ. ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದರು.
ಪ್ರಮುಖರಾದ ಮನೋಜ್ ಜನ್ನೆಹಕ್ಲು, ಗುಡ್ಡಪ್ಪ ಜೋಗಿ, ಸಾವಿತ್ರಿ ಚಂದ್ರಪ್ಪ, ಲೋಕೇಶ್ ಗಾಳಿಪುರ, ಲೋಕೇಶ್ ಎಸ್.ಎಲ್. ಉಪಸ್ಥಿತರಿದ್ದರು.