ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.
ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು.
1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.
ಆಗಿನಿಂದ ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಆರೋಗ್ಯದ ಕಾಳಜಿಯ ಕುರಿತಾದ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ.
ಆರೋಗ್ಯದ ಕುರಿತಾದ ಪ್ರಸ್ತುತಿಗಳು ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುರವರೆಲ್ಲಾ ಕೇವಲ ಸೇವಾಮನೋಭಾವನೆ ಮತ್ತು ಕೃತಾರ್ಥತೆ ಅನುಭವಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ. ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ.
ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ.
ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗುತ್ತದ
ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಕಲೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿಗಳೆಲ್ಲವೂ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತಲೇ ಇರುತ್ತವೆ. ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ.
ಕಾಯಿಲೆ ಬರುವ ಮೊದಲೇ ಅದರ ಬಗ್ಗೆ ಎಚ್ಚರ ವಹಿಸಿ, ತಡೆಗಟ್ಟಲು ಜಾಗೃತರಾಗುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ “ಸಮಾಜದ ಯೋಗಕ್ಷೇಮ’ ಎಂಬ ಪರಿಕಲ್ಪನೆಯಡಿ ಇಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಿದೆ.
ಕೊರೊನಾ ಮಹಾಮಾರಿಯ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಆದರೆ, ಕೊರೊನಾ ಅಲ್ಲದೇ ಅದೆಷ್ಟೋ ರೋಗಗಳು ಸಮಾಜದಲ್ಲಿ ತಾಂಡವವಾಡುತ್ತಿವೆ.. ನೆನಪಿರಲಿ, ಆರೋಗ್ಯವೇ ಭಾಗ್ಯ. ಆರೋಗ್ಯ ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ನಾವು ಆರೋಗ್ಯವಾಗಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸಬಹುದು.