ಹ್ಯಾಟ್ರಿಕ್ ಗೆಲುವಿನ ಸಂದರ್ಭದಲ್ಲಿದ್ದ ಹರಿಯಾಣ ಸ್ಟೀಲರ್ಸ್ ತಂಡದ ಖುಷಿಯನ್ನು ಪುನೇರಿ ಪಲ್ಟನ್ ತಂಡವು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಪ್ರೊ ಕಬಡ್ಡಿ ಲೀಗ್ ನ ಶುಕ್ರವಾರದ ಮೊದಲ ಪಂದ್ಯದಲ್ಲಿ ಪುಣೇರಿ ಬಳಗ 45-27 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ಬಳಗ ಆರಂಭದಿಂದಲೇ ಅಧಿಕಾರಯುತ ಪ್ರದರ್ಶನವನ್ನು ನೀಡಿತು.
ಇದರ ಪರಿಣಾಮವಾಗಿ ಪ್ರಥಮಾರ್ಧ ಮುಕ್ತಾಯದ ವೇಳೆಗೆ 26-07 ಅಂಕಗಳ ಭರ್ಜರಿ ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲೂ ಅದೇ ಮಾದರಿಯ ಪ್ರದರ್ಶನ ಮುಂದುವರಿಸಿ 20-19 ಅಂಕಗಳ ಜಯ ಗಳಿಸಿತು.
ಅಂತಿಮ ಹತ್ತು ನಿಮಿಷಗಳಲ್ಲಿ ಸ್ಟೀಲರ್ಸ್ ಪಡೆ ತಿರುಗೇಟು ನೀಡಿದ ಹೊರತಾಗಿಯೂ ಅಂತರ ಸರಿದೂಗಿಸಲು ಸಾಧ್ಯವಾಗಲಿಲ್ಲ.
ಒಟ್ಟು 19 ಪಂದ್ಯಗಳಲ್ಲಿ 58 ಅಂಕಗಳನ್ನು ಸಂಪಾದಿಸಿರುವ ಹರಿಯಾಣ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಕೊಂಡಿದ್ದು, ಪ್ಲೇ ಆಫ್ ಹಂತದ ನಿರೀಕ್ಷೆಯಲ್ಲಿದೆ.
17 ಪಂದ್ಯಗಳಲ್ಲಿ 47 ಅಂಕ ಗಳಿಸಿರುವ ಪುಣೇರಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.
ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಫ್ಯಾಥರ್ಸ್ ವಿರುದ್ಧ ಯು.ಪಿ. ಯೋಧಾ ತಂಡ 41-34 ಅಂಕಗಳಿಂದ ಜಯ ಸಾಧಿಸಿತು.
14 ಅಂಕ ಗಳಿಸಿದ ಪ್ರದೀಪ್ ನರ್ವಾಲ್ ಗೆಲುವಿನ ರೂವಾರಿ ಎನಿಸಿಕೊಂಡರು.