ಕೊರೋನಾ ಮೊದಲ ಮತ್ತು ಎರಡನೇ ಅಲೆ ಅತ್ಯಂತ ಗಂಭೀರವಾಗಿತ್ತು. ಆ ಪರಿಸ್ಥಿತಿಯಲ್ಲಿ ನಾನು ಎರಡು ಬಾರಿ ಕೋವಿಡ್ ಸೋಂಕಿಗೆ ಒಳಗಾದೆ. ಅದರ ನಡುವೆಯೇ ಒಂದು ಕಡೆ ಆಡಳಿತ ನಿರ್ವಹಣೆ, ಇನ್ನೊಂದೆಡೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ನನಗೆ ಎಲ್ಲ ರೀತಿಯ ಸಹಕಾರ ಕೊಟ್ಟು ಆಡಳಿತವನ್ನು ಸುಸೂತ್ರವಾಗಿ ನಡೆಸಲು ನೆರವಾಗಿದ್ದು ಮಾಧ್ಯಮಗಳು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನ ಪ್ರಕಟಿತ ಪತ್ರಕರ್ತ ಶಿವಾನಂದ ತಗಡೂರು ಅವರ ಕೋವಿಡ್ ಕತೆಗಳು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಶಿವಾನಂದ ತಗಡೂರು ಕೊರೋನಾ ಸಂದರ್ಭದ ಘಟನೆಗಳನ್ನು ಈ ಕೃತಿಯಲ್ಲಿ ಮನಮುಟ್ಟುವ ರೀತಿಯಲ್ಲಿ ನಿರೂಪಿಸಿದ್ದಾರೆ. ಇದು ಕೊರೋನಾ ಕಥೆಯಲ್ಲ. ಇದು ಕಟು ಸತ್ಯ. ಇದನ್ನು ಓದಿದಾಗ ಕೋವಿಡ್ ಸಂದರ್ಭದಲ್ಲಿ ಮಾಧ್ಯಮದವರು ಎದುರಿಸಿದ ಸಮಸ್ಯೆ ಸವಾಲುಗಳು ತಿಳಿಯುತ್ತವೆ. ಕೋವಿಡ್ ನಿಯಂತ್ರಣದಲ್ಲಿ ಪತ್ರಿಕಾರಂಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದೆ. ಈ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವ ಮೂಲಕ ಸರ್ಕಾರ ತನ್ನ ಕರ್ತವ್ಯ ಮಾಡಿದೆ. ಅದೇ ರೀತಿ ಸಂಕಷ್ಟದ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ನೆರವಿಗೆ ಧಾವಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆಗೊಳಿಸಿದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು, ವೈದ್ಯವೃತಿಯಲ್ಲಿ ಮಾನವೀಯತೆ ಅತ್ಯಂತ ಮುಖ್ಯವಾಗಿದೆ. ಖಾಸಗಿ ಆಸ್ಪತ್ರೆಗಳು ಶೇ.20 ರಷ್ಟು ಹಾಸಿಗೆಗಳನ್ನು ಬಡ ಮತ್ತು ಮಧ್ಯಮ ವರ್ಗದವರ ಚಿಕಿತ್ಸೆಗೆ ಮೀಸಲಿಡಲು ನಿರ್ಧಾರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ಪಿ. ರಾಮಯ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.