ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ನಕಲಿ ಮಾರಾಟ ಹೆಚ್ಚಾಗಿದೆ. ಮೈಸೂರಿನಲ್ಲಿ ಕೆಎಂಎಫ್ ನ ಜನಪ್ರಿಯಾ ನಂದಿನಿ ತುಪ್ಪವನ್ನು ನಕಲಿ ತಯಾರಿಕೆ ಮಾಡುವ ಪ್ರಯತ್ನ ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಮಾನವ ಹಕ್ಕುಗಳ ರಕ್ಷಣಾ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿಯ ಸದಸ್ಯರು ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.
ಈ ದಾಳಿಯ ವೇಳೆ ಒಂದೂವರೆ ಟನ್ ಕಲಬೆರಿಕೆ ತುಪ್ಪ, 500 ಕೆಜಿ ವನಸ್ಪತಿ, 500 ಲೀಟರ್ ಪಾಮ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಈ ನಕಲಿ ತುಪ್ಪಕ್ಕೆ ವನಸ್ಪತಿ ಹಾಗೂ ಪಾಮ್ ಆಯಿಲ್ ಸೇರಿಸಿ ನಂದಿನಿ ತುಪ್ಪದ ನಕಲಿ ಲೇಬಲ್ ತಯಾರಿಸಿ, ಸೀಲ್ ಮಾಡಲಾಗಿದೆ. ಈ ವೇಳೆ ಪ್ಯಾಕಿಂಗ್ ಯಂತ್ರ ಪತ್ತೆಯಾಗಿದೆ.
ಈ ದಾಳಿಯಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಆಹಾರ ಸುರಕ್ಷತೆ ಗುಣಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಕಲಿ ನಂದಿನಿ ತುಪ್ಪ ಎಂದು ಖಚಿತಪಡಿಸಿದ್ದಾರೆ.
ಹೊಸಹುಂಡಿ ನಿವಾಸಿ ಕೃಷ್ಣ ಅವರ ತೋಟವನ್ನು 4 ತಿಂಗಳ ಹಿಂದೆಯಷ್ಟೇ ಶ್ರೀರಾಂಪುರದ ಮುರುಗೇಶ್ ಎಂಬವರ ಹೆಸರಿನಲ್ಲಿ ಗುತ್ತಿಗೆ ಪಡೆದುಕೊಳ್ಳಲಾಗಿದೆ. ಮೂರು ತಿಂಗಳಿಂದ ನಕಲಿ ತುಪ್ಪ ತಯಾರಿಕೆ ಮಾಡಲಾಗುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ವಿನೋದ್ ಮಾಹಿತಿ ನೀಡಿದ್ದಾರೆ.
“ನಕಲಿ ನಂದಿನಿ ತುಪ್ಪ ಉತ್ಪಾದನೆ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಪ್ರಕರಣವನ್ನು ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಬೇಕೆಂದು” ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷ ವಿನೋದ್ ಆಗ್ರಹಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.