ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದ್ದರೂ ವಿಧಾನಪರಿಷತ್ತಿನಲ್ಲಿ ಬಹುಮತದ ಕೊರತೆಯಿಂದಾಗಿ ಕೆಲವು ಕಾನೂನು ಯಶಸ್ವಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ.
ಸ್ಥಳೀಯ ಅಭಿವೃದ್ಧಿ ಕ್ರಿಯಾಯೋಜನೆಗಳನ್ನು ಜಿಪಂಗಿ ಕಳುಹಿಸಿ, ಅನುಮೋದನೆ ಪಡೆದುಕೊಳ್ಳುವಲ್ಲಿ ಸಮಸ್ಯೆಗಳ ಆಗುವ ಸಾಧ್ಯತೆಗಳಿವೆ. ಇಂತಹ ತಾಂತ್ರಿಕ ಕಾರಣಗಳಿಂದಾಗಿ 39 ಯೋಜನೆಗಳು ವಿಫಲಗೊಂಡಿವೆ. 6ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿ 1453ಗ್ರಾ.ಪಂ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಯಶಸ್ವಿಯಾಗಿ ಸ್ಥಾಪನೆಗೊಂಡಿವೆ. ಬೇರೆಡೆ ಡಿಪಿಆರ್ ಆಗಿದೆ. ಸ್ಥಳ ಸಮಸ್ಯೆ ಸೇರಿದಂತೆ ಕೆಲವು ಅಡ್ಡಿಗಳಿವೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೀಸಲಾತಿ ಸಂಬಂಧಿತ 2800 ಆಕ್ಷೇಪಗಳು ಇರುವ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಉಪವಿಭಾಗೀಯ ಮಟ್ಟದಲ್ಲಿನ ಕೆಲವು ಕಚೇರಿಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಗಳಿದ್ದರೂ ಕಡತ ವಿಲೇವಾರಿ ವಿಳಂಬವಾಗುತ್ತಿದೆ. ಆದ್ದರಿಂದ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಇಲಾಖೆಗಳ ಕಚೇರಿ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಕೆಎಸ್ ಈಶ್ವರಪ್ಪ ಅವರು ತಿಳಿಸಿದರು.
ಗ್ರಾ. ಪಂ ಗಳಿಗೆ ಸೋಲಾರ್ ಅಳವಡಿಸುವ ವಿಚಾರದಲ್ಲಿ ರಾಜ್ಯ ಮಟ್ಟದಲ್ಲಿ ಗುತ್ತಿಗೆ ನೀಡಲಾಗಿದೆ. ಇದರಿಂದ ಗ್ರಾ ಪಂ ಗಳ ಅಧಿಕಾರ ವಿಕೇಂದ್ರೀಕರಣ ಕಲ್ಪನೆಯನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ರಾಜ್ಯ ಸರ್ಕಾರ ಸೂಚಿಸಿದ ಏಜೆನ್ಸಿಯಿಂದಲೇ ಪಂಚಾಯಿತಿಗಳು ಸೋಲಾರ್ ಹಾಕಿಸಬೇಕು ಎಂಬ ರಾಜ್ಯ ಸರ್ಕಾರ ಯಾವ ಆದೇಶವನ್ನು ಮಾಡಿಲ್ಲ.
ಗುಣಮಟ್ಟಕ್ಕೆ ರಾಜಿ ಇಲ್ಲದಂತೆ ಪ್ರತಿ ಜಿಲ್ಲೆಗೂ ಒಬ್ಬರಂತೆ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಏಜೆನ್ಸಿ ಐದು ವರ್ಷಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದರೆ ಏಜೆನ್ಸಿಗಳ ಮೂಲಕವೇ ಸೋಲಾರ್ ಹಾಕಿಸುವುದು ಕಡ್ಡಾಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಾಗರದ, ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಂಎಸ್ಐಎಲ್ ಅಧ್ಯಕ್ಷ ಮತ್ತು ಶಾಸಕ ಎಚ್. ಹಾಲಪ್ಪ, ಪಕ್ಷದ ಅಭ್ಯರ್ಥಿ ಡಿ.ಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್, ಸ್ಥಳೀಯ ಮಂಡಳಗಳ ಅಧ್ಯಕ್ಷರಾದ ಲೋಕನಾಥ್ ಬಿಳಿಸಿರಿ ಇನ್ನು ಮುಂತಾದವರು ಉಪಸ್ಥಿತರಿದ್ದರು.