ಸಾಲ ಸೌಲಭ್ಯದಿಂದ ವಂಚಿತರಾಗುತ್ತಿದ್ದ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದ ಫಲಾನುಭವಿಗಳು, ಬೆಳೆ ನಷ್ಟದ ಪರಿಹಾರದಿಂದಲೂ ವಂಚಿತರಾಗಿದ್ದಾರೆ. ಜಿಲ್ಲಾದ್ಯಂತ ಅಕಾಲಿಕ ಮಳೆಯಿಂದ ಕಾಫಿ, ಕಾಳುಮೆಣಸು, ಭತ್ತ, ಅಡಿಕೆ ಸೇರಿದಂತೆ ಬೆಳೆ ನಷ್ಟ ಅನುಭವಿಸಿರುವ ಈ ಫಲಾನುಭವಿಗಳು ಎನ್ ಡಿಆರ್ ಎಫ್ ಪರಿಹಾರವೂ ಸಿಗದೆ ಪರದಾಡುವಂತಾಗಿದೆ.
ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದುಕೊಂಡವರಿಗೆ ಪಹಣಿ ಸಮಸ್ಯೆಯಿಂದ ಬೆಳೆ ಪರಿಹಾರ ಸಿಗದಂತೆ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಬೇಕು ಎಂದು ಕಳಸದ ಬುಡಕಟ್ಟು ರೈತ ಉತ್ಪಾದಕರ ಸಂಘದ ಕಾರ್ಯದರ್ಶಿ ಸುರೇಶ್ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅಧಿನಿಯಮ 2006 ಮತ್ತು ನಿಯಮ 2008, ತಿದ್ದುಪಡಿ ನಿಯಮ 2012 ರ ಪ್ರಕಾರ ಪರಿಶಿಷ್ಟ ಪಂಗಡ ಇತರೆ ಪಾರಂಪರಿಕ ಅರಣ್ಯವಾಸಿಗಳು 2005ರ ಡಿಸೆಂಬರ್ 13ಕ್ಕೆ ಮೊದಲು ಅರಣ್ಯದಲ್ಲಿ ವಾಸ ಅಥವಾ ಜೀವನೋಪಾಯಕ್ಕೆ ಅರಣ್ಯ ಪ್ರದೇಶದ ಮೇಲೆ ಅವಲಂಬಿತರಾಗಿದ್ದರೆ ಅರಣ್ಯ ಹಕ್ಕು ಪಡೆಯಲು ಅರ್ಹತೆ ಪಡೆದಿದ್ದರು.
ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾಗಿರುವ ಜಮೀನಿಗೆ ಬ್ಯಾಂಕುಗಳು ಕೃಷಿ ಸಾಲವನ್ನೂ ನೀಡುತ್ತಿಲ್ಲ. ಸರ್ಕಾರವೇ ಮಂಜೂರು ಮಾಡಿಕೊಟ್ಟಿರುವ ಈ ಭೂಮಿಗೆ ಹಕ್ಕುಪತ್ರ ಕೊಟ್ಟಿರುವುದು ಬಿಟ್ಟರೆ ಬಹುತೇಕ ಪ್ರಕರಣಗಳಲ್ಲಿ ಪಹಣಿ, ಖಾತೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಟ್ಟಿಲ್ಲ. ಇಂತಹ ದಾಖಲೆಗಳಿಲ್ಲದ ಕಾರಣ ಸಾಲ ಸೌಲಭ್ಯದಿಂದಲೂ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅರಣ್ಯ ಹಕ್ಕು ಕಾಯಿದೆಯಡಿ ನೀಡಿರುವ ಹಕ್ಕುಪತ್ರದಲ್ಲಿ ಸಿಗುವ ಪಹಣಿ ಆನ್ ಲೈನ್ ನಲ್ಲಿ ಫೀಡ್ ಆಗುತ್ತಿಲ್ಲ. ಬೆಳೆ ಹಾನಿ ಆಗಿರುವ ಇಂತಹ ರೈತರು ಅರ್ಜಿ ಸಲ್ಲಿಸಿದರೆ ಅರ್ಜಿಗಳನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಕಳಸದ ನಾಡಕಛೇರಿ ಕಂದಾಯ ನಿರೀಕ್ಷಕರಾದ ಅಜ್ಜೇಗೌಡ ಅವರು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ ಫಲಾನುಭವಿಗಳು ,ಪರಿಹಾರ ವಂಚಿತರು
Date: