ಕನಕದಾಸರು..ಮಹತ್ವದ ಕವಿಗಳು. ದಾಸ ಸಮೂಹದಲ್ಲೇ ಅತೀವ,ಅದ್ಭುತ ಕಲ್ಪನಾಶಕ್ತಿಯುಳ್ಳ ಪ್ರತಿಭೆ. ಅವರ ಪ್ರತಿಮೆ,ರೂಪಕಗಳು ದಾಸ ಸಾಹಿತ್ಯ ಸಹೃದಯರನ್ನ ಸೋಜಿಗದ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ವಿವಿಧ ಕೃತಿಗಳ ಒಳಹೊಕ್ಕು ಅವರನ್ನ ಅರ್ಥಮಾಡಿಕೊಳ್ಳುವ ಸಾಹಸ ಇನ್ನೂ ಪೂರ್ಣವಾಗಿಲ್ಲವೇನೊ? ಅಂತ ಅನಿಸುತ್ತದೆ. ಅವರ ಮುಂಡಿಗೆಗಳನ್ನ ಓದಿದಾಗ ಇದು ನಮಗೆ ವೇದ್ಯವಾಗುತ್ತದೆ.ವಿದ್ವಾಂಸರೂ ಕೂಡ ಒಂದುಕ್ಷಣ ಮನಮಂಥನ ಮಾಡಿಕೊಳ್ಳುವಂತಿದೆ… ಪೂರ್ಣ ಅವುಗಳ ಬಗ್ಗೆ ವಿಶೇಷ ಅಧ್ಯಯನವೇ ಬೇಕೇನೊ?.ಏಕೆಂದರೆ ಅವರ ಗೂಢಾರ್ಥಗಳು ಒಬ್ಬೊಬ್ಬರಿಗೆ ಒಂದೊಂದು ಅರ್ಥ ನೀಡುತ್ತವೆ.
ಬಹಳ ಸಹೃದಯರ ಅಂತಃಕರಣ ಕಲಕಿ,ಆಂತರ್ಯ ಮೀಟಿದ ಮುಂಡಿಗೆಗಳಲ್ಲಿ ” ಮರವ ನುಂಗು ಪಕ್ಷಿ.ಮನೆಯೊಳಗೆ ಬಂದಿದೆ!. ಇದರ ಕುರುಹ ಪೇಳಿ ಕುಳಿತಿರುವ ಜನರು!” ಒಂದಾಗಿದೆ. ಅತ್ಯಂತ ಆಸಕ್ತಿಪೂರ್ವಕ ಓದಿಸಿಕೊಳ್ಳುತ್ತದೆ.ಇದನ್ನ ಆಮೂಲಾಗ್ರ ಜೀರ್ಣಿಸಿಕೊಳ್ಳುವಲ್ಲಿ ಬೇಕಾದದ್ದು ಅತೀ ಬುದ್ಧಿವಂತಿಕೆಯಲ್ಲ.ಸಾಮಾನ್ಯ ಜ್ಞಾನ ಎಂಬುದನ್ನ ಮುಂಡಿಗೆಗಳನ್ನ ಬಿಡಿಸಿದ ಜಾಣ/ಜಾಣೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಅಲೌಕಿಕ ಸಂಗತಿಗಳ ಮೂಲಕ ಲೌಕಿಕ ಸಾಮಗ್ರಿಯನ್ನ ಆಧರಿಸಿ ನಮ್ಮನ್ನ ಆಧ್ಯಾತ್ಮದ ಸುಳಿಯಲ್ಲಿ ಸಿಕ್ಕಿಸಿಬಿಡುತ್ತಾರೆ. ಸಮಾಧಾನದ ಚಿತ್ತದಿಂದ ಗ್ರಹಿಸಿದಾಗ ಮುಂಡಿಗೆಗಳ ಅಂತರಂಗ ಹೂವಿನ ಪಕಳೆಗಳಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.! ನೋಡಲಿಕ್ಕೆ ಬೆರಗು,ಬೆಡಗು ತುಂಬಿದ ಸಾಲುಗಳು.
” ಒಂಟಿಕೊಂಬಿನ ಪಕ್ಷಿ,ಒಡಲೊಳಗೆ ಕರುಳಿಲ್ಲ.ಗಂಟಲು ಮೂರುಂಟು ಮೂಗು ಇಲ್ಲ.ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು.” ಕೊಂಚ ಅದರೊಳಗೇ ಸಾಗಿದರೇ ಬೀಸುವ ಕಲ್ಲಿನ ಪ್ರತಿಮೆ ಇದನ್ನೆಲ್ಲ ಒಳಗೊಂಡಿದೆ ಎಂಬ ಅರ್ಥ ಹೊಳೆದಾಗ ನಮಗೆ ನಾವೇ ಚೋದ್ಯದೊಳಗೇ ಮುಳುಗಿಬಿಡುತ್ತೇವೆ.
ಬೀಸುವ ಕಲ್ಲಿನ ಗೂಟ,ಒಂಟಿಕೊಂಬು. ಎರಡೂ ವೃತ್ತಾಕಾರದ ಕಲ್ಲಿನ ನಡುವೆ ಏನಿಲ್ಲ.( ಕರುಳಿಲ್ಲ). ನಡುವೆ ಕೇಂದ್ರ ಬಿಂದುವಿನಲ್ಲಿ ಕಾಳು ಹಾಕಲು ಪುಟಾಣಿ ಗುಣಿ.ಅದಕ್ಕೆ ಮೂರು ರಂಧ್ರಗಳು( ಗಂಟಲು). ..ಹೀಗೇ ಬೀಸುವ ಕಲ್ಲಿನ ಚಿತ್ರ ನಮ್ಮ ಚಿತ್ತದಲ್ಲಿ ಕೆತ್ತಿಕೊಳ್ಳುತ್ತಾ ಸಾಗುತ್ತದೆ.ಇದು ಜನಪ್ರಿಯವಾದ ಅವರ ಮುಂಡಿಗೆಯ ಒಂದು ಝಲಕ್ ಅಷ್ಟೆ.
ಅವರ ಕೃತಿರಚನೆಯ ಮೂಸೆಯಲ್ಲಿ ಅನೇಕ ಅದ್ಭುತ ಚಮತ್ಕಾರಗಳನ್ನ ಓದಿ ಅನುಭವಿಸಬಹುದು. ಈಗ ನರಸಿಂಹಾವತಾರದ ಒಂದು ಪ್ರಸಂಗ.
ಪ್ರಹ್ಲಾದ ತನ್ನ ತಂದೆಗೆ ಕಂಬದಲ್ಲೂ ಇದ್ದಾನೆ ಹರಿ!.ಎಂದ ತಕ್ಷಣ ಅದಕ್ಕೆ ಗದೆಯನ್ನ ಘಟ್ಟಿಸಿದಾಗ ಉಂಟಾದ ದೃಶ್ಯವನ್ನ ಕನಕದಾಸರ ಹಾಡಿನಲ್ಲೇ ಕಾಣಬೇಕು.
ಘುಡುಘುಡಿಸಿ ಕಂಬದಲಿ ದಢದಢ ಸಿಡಿಲು ಸಿಡಿಯೆ ಕಿಡಿಕಿಡಿಸೆ!.ಇದ್ದಕ್ಕಿದ್ದಂತೆ
ಅರಮನೆಯ ಕಂಬ ಬಿರಿಯುವ,..ಹೋಳಾಗುವ ಕ್ರಿಯೆ ಧ್ವನಿಪೂರ್ಣವಾಗಿ ಪದಗಳಲ್ಲೇ ತುಂಬಿದ್ದಾರೆ.ಕಂಬದೊಳಗೆ ಮುಂಚೆ ಉದ್ಭವಿಸಿದ ಸದ್ದು ‘ಘುಡುಘುಡು’ ಎದೆ ನಡುಗುವ ರೀತಿ ಕೇಳಿಸಿತಂತೆ.ಆ ಕಂಬ ಒಡೆದ ಪರಿ ಹೇಗಿತ್ತೆಂದರೆ ” ದಢದಢ ” ಸಿಡಿಲು ಬಡಿಯುವುದಲ್ಲ ಸಿಡಿಯಿತು ಎನ್ನುತ್ತಾರೆ! ಅಷ್ಟಕ್ಕೇ ನಿಲ್ಲಿಸುವುದಿಲ್ಲ!.ಅಲ್ಲಿಂದ ಬೆಂಕಿಯ ಕಿಡಿಗಳು ಹೊತ್ತಿಕೊಂಡವಂತೆ!.
ಮುಂದೇನಾಯಿತು ಎಂದರೆ” ನುಡಿಯಡಗಲೊಡನೆ ಮುಡಿವಿಡಿದು…” ಅಂದರೆ ನೇರ ಹಿರಣ್ಯಕಶಿಪುವಿನ ಗಂಟಲೊಣಗಿತು.ಅವನ ” ಮುಡಿವಿಡಿದು”
ಘಡಘಡನೆ ನಡುಗಿತು ಇಡೀ ಅರಮನೆ.ಘುಡುಘುಡಿಸಿ ಕಂಬದಿಂದ ನೆಲಕ್ಕೆ ಪಾದವಿಟ್ಟಿದ್ದೇ ತಡ ಇಡೀ ವಾತಾವರಣ ಒಂದುಕ್ಷಣ ಮಂಕಾಯಿತು.ಇಂಥ ಸಂದರ್ಭದಲ್ಲೇ ನರಸಿಂಹನಾಗಿ ಕಂಡ ಶ್ರೀಹರಿ. ಹಿರಣ್ಶಕಶಿಪುವನ್ನ ತನ್ನತೊಡೆಯ ಮೇಲೆ ಕೆಡವಿಕೊಂಡ ಆ ಭೀಕರ ಸನ್ನಿವೇಶ ಈ ಸಾಲುಗಳಲ್ಲಿ ಮೂಡುತ್ತಾ ಹೋಗಿದೆ.
ಮುಂದಿನ ಚಿತ್ರ ಕಟ್ಟಿಕೊಡುವ ಕನಕರ ಕಾವ್ಯಶಕ್ತಿ ಇನ್ನೊಂದು ಮಜಲು ತಲುಪುತ್ತದೆ. ಹಿರಣ್ಯಕಶಿಪುವಿನ ಸಂಹಾರದ ಚಿತ್ರಣ ಅಷ್ಟೇ ರೌದ್ರವಾಗಿದೆ.
ಉರದೊಳಪ್ಪಳಿಸಿ ಅರಿಬಸಿರ ಸರಸರನೆ ಸೀಳಿ….ಎಂಬಲ್ಲಿ ಹಿರಣ್ಯಕಶಿಪುವಿನ
ಎದೆ ಸೀಳಿ,ಕರುಳ ಬಗೆದ. ಅದು ಹೇಗಿತ್ತು?. ಪರಿಪರಿಯಲಿ ಚರ್ಮ ಎಳೆದೆಳೆದು ನರಗಳನ್ನ ನೂಲಿನೆಳೆಗಳಂತೆ ಸೆಳೆದನಂತೆ.ಜೊತೆಗೆ ರಕ್ತತೊಯ್ದು ಕರುಳನ್ನ ಕೊರಳಿಗೆ ಹಾರಹಾಕಿಕೊಂಡ ಪ್ರಹ್ಲಾದನ ಆರಾಧ್ಯ ದೈವ.ಕೈಗಳಿಂದ
ನೆತ್ತರು ದಳದಳ ಇಳಿಯುತ್ತಿದ್ದ ಶ್ರೀಹರಿಯನ್ನ ಕನಕರು ನಮಗೆ ತೋರಿಸುತ್ತಾರೆ.ಇಡೀ ವಿವರಣೆ ಸಹೃದಯನಲ್ಲಿ ಸಂಹಾರ ಕ್ರಿಯೆಯ ಭಿಭತ್ಸ
ಚಿತ್ರ ಮೂಡುತ್ತದೆ.
ಮುಂದಿನ ಪಂಕ್ತಿಗಳಲ್ಲಿ ಕನಕರು ಆಗಷ್ಟೇ ಕಟ್ಟಿಕೊಟ್ಟಿದ್ದ ರೌದ್ರ ದೃಶ್ಯಕ್ಕೆ ತದ್ವಿರುದ್ಧವಾಗಿ ಚಮತ್ಕಾರಿಕೆಯೆಂಬಂತೆ ಶಾಂತ ಸ್ಥಿತಿಗೆ ನಮ್ಮನ್ನೊಯ್ಯುವರು.
ಪ್ರಜಾಪೀಡಕ ಅರಸನ ಅಂತ್ಯದಿಂದ ಪುರಜನರೆಲ್ಲ ಸಮಾಧಾನಪಟ್ಟರು. ದೇವಾನುದೇವತೆಗಳೆಲ್ಲ ಹೂಮಳೆಗೈದರು.ಸಂಗಡ ವಿವಿಧ ವಾದ್ಯಗಳ ನಾದ ಮುಗಿಲುಮುಟ್ಟಿತ್ತು. ಒಟ್ಟು ಸಂಭ್ರಮದ ಸನ್ನಿವೇಶ ಓದುಗನೂ ಮಿಂಚಿನಂತೆ
ನಿಟ್ಟುಸಿರು ಚೆಲ್ಲುವಂತಾಗುತ್ತದೆ.ಮುಗ್ಧ ಶಿಶು ಪ್ರಹ್ಲಾದ ಶ್ರೀಹರಿಯನ್ನ ಮನಸಾರೆ ಸ್ತುತಿ ಮಾಡಿದ.ಆ ಶ್ರೀಹರಿಯೇ ಕಾಗಿನೆಲೆಯಾದಿಕೇಶವನಾಗಿ ಕನಕರ ಮೆಚ್ಚಿನ ಅಂಕಿತವಾಗಿ ಲಾಸ್ಯವಾಡಿದ್ದಾನೆ.
ಅದೇ ಚಿತ್ರ ರಚನೆಯ ಪಲ್ಲವಿಯಲ್ಲಿ ಕಡೆಯುತ್ತಾರೆ.
” ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ,ರಿಪುಗಂಡ
ಉದ್ದಂಡ ನರಸಿಂಹನ ಕಂಡೆನಯ್ಯ…”
ಇಡೀ ರಚನೆಯಲ್ಲಿ ಅಸಾಮಾನ್ಯ ರೂಪದಲ್ಲಿ ಕಾಣಿಸಿಕೊಂಡ ,ದುಷ್ಟಶಿಕ್ಷಕ ನರಸಿಂಹಾವತಾರವನ್ನ ತಾವೇ ಅದೀಗ ಕಂಡಂತೆ ಬೆರಗಾಗುತ್ತಾರೆ.
ದೈವಗಣದಲ್ಲಿ ಪ್ರಚಂಡನಾಗಿ ತೋರಿದ್ದಾನೆ ಶ್ರೀಹರಿ!.ದಾಸರಿಗೆ ವಿಷ್ಣುಪಾರಮ್ಯವನ್ನ ಎಷ್ಟು ಹೋಲಿಕೆಮಾಡಿದರೂ ತೃಪ್ತಿಯಿಲ್ಲ.!
ಶಬ್ದಜಾಲದಲ್ಲೇ ಅಕ್ಷರಗಳ ನಾಟ್ಯ.ಅರ್ಥವನ್ನ ಸಮರ್ಥವಾಗಿ ಹೊಮ್ಮಿಸುವ
ಹೆಮ್ಮೆಯ ಕವಿ ಕನಕದಾಸರು.ನರಸಿಂಹ ಅವತಾರ ಆಗಿಹೋದ ಪೌರಾಣಿಕ ಸಂಗತಿ.ಆದರೆ ಅವರ ಈ ಕೃತಿ ಮನನಮಾಡಬೇಕು. ಮತ್ತೆ ಮತ್ತೆ ನಮ್ಮ ಮನಃಪಟಲದಲ್ಲೇ ನರಸಿಂಹಮೂಡುತ್ತಾನೆ. ಲೌಕಿಕದ ಜಡತೆಯನ್ನ ಸೀಳಿಕೊಂಡೇ ಧುತ್ತನೆ ದರ್ಶನ ನೀಡುವಂತೆ ಮಾಡುತ್ತಾರೆ ಕನಕದಾಸರು.
ಅಕ್ಷರಗಳಲ್ಲಿ ಅತಿಶಯರೂಪಿನ ಪರಮಾತ್ಮನನ್ನ ಕಾವ್ಯಶಕ್ತಿ ಮೂಲಕ ಸಾಕ್ಷಾತ್ಕರಿಸಿದ ಕನಕ ಪ್ರತಿಭೆಗೆ ಸಾವಿರದ ಶರಣು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.