ಹಿರೇಕೆರೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮಕ್ಕೇ ಕನ್ನಡ ಚಲನಚಿತ್ರದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಾಲನೆ ನೀಡಿದರು.
ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಇಡೀ ಹಿರೇಕೆರೂರು ತಾಲೂಕು ಮದುವಣಗಿತ್ತಿಯಂತೆ ಸಿಂಗಾರಗೊಂಡು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು, ವೀರಗಾಸೆ, ಡೊಳ್ಳು ಕುಣಿತ, ಎತ್ತಿನ ಬಂಡಿ ಹಾಗೂ ಮೀರಿದ ವಾದ್ಯ ಮೇಳಗಳ ಮೆರವಣಿಗೆಯೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಈ ಸಮಾರಂಭದಲ್ಲಿ ಸಾಧಕ ರೈತರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರೈತರಿಗೆ ಉಪಯೋಗವಾಗುವಂತಹ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಜೇನು ಸಾಕಾಣಿಕೆ ಕುರಿತು ಪ್ರಾತ್ಯಕ್ಷಿಕೆ, ಪುರುಷರಿಗೆ ಹಾಲು ಕರೆಯುವ ಸ್ಪರ್ಧೆ, ಮಹಿಳೆಯರಿಗೆ ಮಜ್ಜಿಗೆ ಕಡೆಯುವ ಮತ್ತು ಹಿಟ್ಟು ಬೀಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ರೈತರು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಸಚಿವ ಬಿ.ಸಿ.ಪಾಟೀಲ್ ಅವರು ರೈತರಿಗೆ ಸಲಹೆ ನೀಡಿದರು.
ಇದೇ ಮೊದಲ ಬಾರಿಗೆ ನನ್ನ ತಾಲೂಕಿನಲ್ಲಿನ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ಸಮಗ್ರ ಕೃಷಿ ನೀತಿ ಅನುಸರಿಸಿ ಉಪಕಸುಬುಗಳನ್ನು ಸಹ ಅಳವಡಿಸಿಕೊಳ್ಳಿ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ ಪೊಲೀಸ್ ಆಗಿ, ನಟನಾಗಿ, ನಿರ್ಮಾಪಕನಾಗಿ ಈಗ ಸಚಿವರಾಗುವುದು ಬಹಳ ಸುಲಭದ ಕೆಲಸವಲ್ಲ. ಏನೇ ಕೆಲಸವಾಗಲಿ ಅದನ್ನ ಗುರಿ ಇಟ್ಟು ಮಾಡಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಇದಕ್ಕೆ ಬಿ.ಸಿ.ಪಾಟೀಲರ ಸಾಕ್ಷಿ. “ಬಿ.ಸಿ.ಪಾಟೀಲರ ನಾ ನಾನು ಪ್ರೀತಿಯಿಂದ ಕಾಕಾ ಅವರೇ” ಎಂದು ಕರೆಯುತ್ತೇನೆ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬು. ರೈತ ಭೂಮಿತಾಯಿಯನ್ನು ನಂಬಿ ಕಷ್ಟಪಟ್ಟು ದುಡಿಯುತ್ತಾನೆ. ಹಾಗಾಗಿ ರೈತರು ತಂತ್ರಜ್ಞಾನ ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಫಸಲು ಬೆಳೆದಲ್ಲಿ ತಮ್ಮ ಆದಾಯ ದ್ವಿಗುಣ ಗೊಳಿಸಬಹುದು ಎಂದು ತಿಳಿಸಿದರು.