ಮಾನವ ಜೀವನಕ್ಕೆ ಭದ್ರತೆ ಮತ್ತು ಬದ್ದತೆ ಬೇಕು. ಕೃಷಿಯಿಂದ ಈ ಎರಡೂ ಸಾಧ್ಯವಾಗಿದ್ದು, ಪ್ರಸ್ತುತ ಯಾಂತ್ರೀಕೃತ ಬದುಕನ್ನು ಬದಲಾಯಿಸಿಕೊಂಡು ಉತ್ತಮ ಆಹಾರ ಪದ್ದತಿ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಶಿವಮೊಗ್ಗ ಇವರ ಸಹಯೋಗದೊಂದಿಗೆ ನವೆಂಬರ್ 12 ಮತ್ತು 13 ರಂದು ಕೃಷಿ ಮೇಳ-2021 ನ್ನು ಕಳಸಿಗೆ ಭತ್ತ ತುಂಬುವ ಮೂಲಕ ಶ್ರೀ ಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಾವ ದೇಶದಲ್ಲಿ ಕೃಷಿ ಜೀವನ ಅಭದ್ರತೆಯಿಂದ ಕೂಡಿರುತ್ತದೋ ಅಂತಹ ದೇಶದ ಭವಿಷ್ಯ ಉಜ್ವಲವಾಗಿರುವುದಿಲ್ಲ. ಕೃಷಿ ಪ್ರಧಾನ ಜೀವನದಲ್ಲಿ ನಿರಂತರ ಭದ್ರತೆಯಂತೂ ಇದ್ದೇ ಇರುತ್ತದೆ. ಆವಿಷ್ಕಾರ, ತಂತ್ರಜ್ಞಾನದಿಂದ ಆಹಾರಧಾನ್ಯ ಉತ್ಪಾದಿಸಲು ಸಾಧ್ಯವಿಲ್ಲ. ಭೂಮಿಯ ಮೂಲಕ ಆಹಾರೋತ್ಪನ್ನ ಸಾಧ್ಯ. ನಮ್ಮದು ಭೂಮಿ ಆಧಾರಿತ ಬದುಕು. ಭೂಮಿ ಅಥವಾ ಜಮೀನು ಬಿಟ್ಟರೆ ಬದುಕೇ ಇಲ್ಲ ಎಂದರು.
ರಾಗಿ-ಸಿರಿಧಾನ್ಯ ಬಳಸಿ : ರಾಗಿ ತಿಂದು ನಿರೋಗಿಯಾಗು ಎನ್ನುವ ನುಡಿಯಂತೆ ನಾವೆಲ್ಲ ದಿನಕ್ಕೆ ಒಮ್ಮೆಯಾದರೂ ರಾಗಿಯಿಂದ ತಯಾರಿಸಿದ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥ ಸೇವಿಸಬೇಕು. ನಾನು ದಿನವೂ ಒಂದೊತ್ತು ರಾಗಿ ಅಥವಾ ಸಿರಿಧಾನ್ಯ ಸೇವಿಸುತ್ತೇನೆ. ನವಣಕ್ಕಿ ಹೊನ್ನು ಅಕ್ಕಿ ಬೆಳ್ಳಿ ಎಂದರು.
ಬಹುಬೆಳೆ ಬೆಳೆಯಿರಿ : ರೈತರು ಒಂದೇ ರೀತಿಯ ಬೆಳೆಯನ್ನು, ಒಂದೇ ರೀತಿಯ ವಾಣಿಜ್ಯ ಬೆಳೆ ಬೆಳೆಯುವುದಕ್ಕಿಂತ ಬಹುಬೆಳೆ ಬೆಳೆಯಬೇಕು. ಆಗ ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ಎಲ್ಲ ರೈತರು ಬಹುಬೆಳೆ ಪದ್ದತಿಯನ್ನು ಅನುಸರಿಸುವುದು ಮುಖ್ಯ ಎಂದು ಸಲಹೆ ನೀಡಿದ ಅವರು ರೈತರ ಬೆಳೆಗೆ ಸೂಕ್ತ ಬೆಲೆ ದೊರಕದ ಕಾರಣ ಬೆಂಬಲ ಬೆಲೆ ಬೇಡುತ್ತಾರೆ. ರೈತರ ಬೆಳೆಗೆ ಉತ್ತಮ ಬೆಲೆ ಲಭಿಸುವಂತೆ ಆಗಬೇಕು. ಕೃಷಿ ವಿಶ್ವವಿದ್ಯಾಲಯಗಳು ಕೂಡ ರೈತರು ಮತ್ತು ಕೃಷಿಪರವಾಗಿ ಕೆಲಸ ಮಾಡುತ್ತಿದ್ದು, ಇಂದಿನ ಕೃಷಿ ಮೇಳದ ಮುಖಾಂತರ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಮಾದರಿ ಮತ್ತು ಆದರ್ಶಗಳನ್ನು ರೈತರು ಮತ್ತು ಜನ ಸಾಮಾನ್ಯರಿಗೆ ಬಿತ್ತರಿಸುತ್ತಿದೆ ಎಂದರು.
ವಿಶೇಷ ಆಹ್ವಾನಿತರ ಭಾಷಣವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಮರ ಆಧಾರಿತ ಕೃಷಿಕರಾದ ವಿಜಯಪುರದ ಹೆಚ್.ವಿ ಸಜ್ಜನರವರು ನಡೆಸಿಕೊಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುರಘಾ ಶ್ರೀಗಳು ಇತರೆ ಗಣ್ಯರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೇಷ್ಟ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪುರಸ್ಕಾರ ವಿತರಿಸಿದರು.
ಚಿಕ್ಕಮಗಳೂರಿನ ಬ್ಲಾಕ್ ಗೋಲ್ಡ್ ಲೀಗ್ ಅಧ್ಯಕ್ಷ ಕೆ.ಆರ್.ಕೇಶವ, ಹಾಗೂ ಪ್ರಗತಿಪರ ಕೃಷಿಕರಾದ ಕೆ.ಗುಣಪಾಲ್ ಕಡಂಬ ತಾಂತ್ರಿಕತೆ ಮತ್ತು ತಳಿಗಳ ಬಿಡುಗಡೆ ಮಾಡಿದರು. ವಿವಿ ಕುಲಪತಿಗಳಾದ ಡಾ.ಎಂ.ಕೆ.ನಾಯಕ್, ಶಿಕ್ಷಣ ನಿರ್ದೇಶಕ ಡಾ.ಎಂ.ಹನುಮಂತಪ್ಪ, ಕುಲಸಚಿವ ಡಾ.ಲೋಕೇಶ್.ಆರ್, ಡಾ.ಮೃತ್ಯುಂಜಯ ವಾಲಿ, ಡಾ.ದಿನೇಶ್ ಕುಮಾರ್.ಎಂ ಡಾ.ಶಿವಶಂಕರ್ ಎನ್ ಇವರು ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಿದರು.
ಮುರಘಾ ಶ್ರೀಗಳು ಕೃಷಿ ಮೇಳದ ವಿಶೇಷತೆಗಳಾದ ತಂತ್ರಜ್ಞಾನ ಉದ್ಯಾನವನ, ಭತ್ತ, ರಾಗಿ ಮತ್ತು ಮೆಕ್ಕೆಜೋಳ ತಳಿ ಮತ್ತು ತಂತ್ರಜ್ಞಾನ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಕೃಷಿ ಪರಿಕರಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ವಿವಿಧ ಇಲಾಖೆಗಳಿಂದ ಸ್ಥಾಪಿಸಲಾದ ಮಳಿಗೆಗಳನ್ನು ವೀಕ್ಷಿಸಿದರು.
ಕೃಷಿ ಮಳಿಗೆಗಳು : ಕೃಷಿ ಮೇಳದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು, ಪಶುಸಂಗೋಪನೆ, ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 36 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರೈತರ, ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕ/ಬೋಧಕೇತರ ವರ್ಗ, ವಿದ್ಯಾರ್ಥಿಗಳು, ರೈತರು ಉಪಸ್ಥಿತರಿದ್ದರು. ವಿವಿ ವಿಸ್ತರಣಾಧಿಕಾರಿ ಡಾ.ಬಿ.ಹೇಮ್ಲಾನಾಯ್ಕ ಸ್ವಾಗತಿಸಿದರು. ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ.ವಾಲಿ ವಂದಿಸಿದರು.