ಎಡಬಿಡದೆ ಚೆನ್ನೈ ನಗರವನ್ನು ಹಾಗೂ ತಮಿಳುನಾಡಿನ ಕೆಲವು ಭಾಗಗಳನ್ನು ಕಾಡಿದ ವರುಣನಿಗೆ ಇನ್ನೂ ತೃಪ್ತಿಯಾಗಿಲ್ಲ.
ಆಸ್ತಿ-ಪಾಸ್ತಿ, ಜೀವಹಾನಿ ಎಲ್ಲವೂ ಆಗುತ್ತಿದೆ. ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. 157 ಜಾನುವಾರು ಮೃತಪಟ್ಟಿದೆ. ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ. 10 ಸಾವಿರ ಜನರಿಗೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಮಿಳುನಾಡು ಕಂದಾಯ ಸಚಿವ ರಾಮಚಂದ್ರನ್ ತಿಳಿಸಿದ್ದಾರೆ.
ಶ್ರೀಮತಿ ರಾಜೇಶ್ವರಿ ಎಂಬ ಮಹಿಳಾ ಇನ್ಸ್ಪೆಕ್ಟರ್, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವಿಜಯ್ ಕುಮಾರ್ ಎಂಬವರನ್ನು ಹೆಗಲ ಮೇಲೆ ಹೊತ್ತು ,ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಸಿಬ್ಬಂದಿಯೂ 1840 ಪುರುಷರು, 1963 ಮಹಿಳೆಯರು, 994 ಮಕ್ಕಳು ಮತ್ತು 9 ತೃತೀಯಲಿಂಗಿ ಗಳನ್ನು ಮಳೆಯಿಂದ ರಕ್ಷಿಸಲಾಗಿದೆ. ಇವರೆಲ್ಲರನ್ನೂ ಚೆನ್ನೈ ಕಾರ್ಪೋರೇಷನ್ನಿನ 87 ವಸತಿ ಕೇಂದ್ರಗಳಲ್ಲಿ ದಾಖಲು ಮಾಡಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಇಡೀ ತಮಿಳುನಾಡಿನ ಸಂಕಷ್ಟಕ್ಕೆ ಕಾರಣವಾಗಿದೆ. ಮಳೆಯಿಂದಾಗಿ ಸಂಚಾರವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಐದು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಚೆನ್ನೈಗೆ ಆಗಮಿಸಬೇಕಿದ್ದ 14 ವಿಮಾನಗಳನ್ನು ಬೇರೆ ಕಡೆಗೆ ಕಳುಹಿಸಲಾಯಿತು. ಹಾಗೂ 22 ವಿಮಾನಗಳನ್ನು ರದ್ದುಗೊಳಿಸಲಾಯಿತು.