ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆಯ ಪಂಚಾಯತಿಗಳಿಗೆ ಸರ್ಕಾರ ನೀಡುವ ಅಭಿವೃದ್ಧಿ ಅನುದಾನವನ್ನು ಸ್ಥಗಿತಗೊಳಿಸಿದೆ. 2018-19 ರಲ್ಲಿ 6 ಸಾವಿರ ಜನಸಂಖ್ಯೆ ಇರುವ ಪಂಚಾಯಿತಿಗಳಿಗೆ ಸರ್ಕಾರ ಹತ್ತು ಲಕ್ಷ ರೂಪಾಯಿ ಅಭಿವೃದ್ಧಿ ಅನುದಾನವನ್ನು ಬಿಡುಗಡೆ ಮಾಡಿತ್ತು ಅಲ್ಲಿಂದೀಚೆಗೆ ಒಂದೇ ಒಂದು ಪೈಸೆ ಕೂಡ ಅನುದಾನ ಬಂದಿಲ್ಲ ಎಂದು ಪಂಚಾಯ್ತಿಗಳ ಮೂಲಗಳು ತಿಳಿಸಿವೆ.
ಸರ್ಕಾರದ ಈ ನಿರ್ಧಾರದಿಂದ ಪಂಚಾಯಿತಿಗಳಲ್ಲಿ ನಿರ್ವಹಿಸುವ ಸಿಬ್ಬಂದಿಗಳಿಗೆ ಎರಡು ಮೂರು ತಿಂಗಳಿಂದ ವೇತನ ಬಾಕಿ ಉಳಿದಿದೆ. ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ನೀರುಗಂಟಿ, ಕಚೇರಿ ಸಹಾಯಕ ಮತ್ತು ಸ್ವಚ್ಛತಾಗಾರರಿಗೆ ಪಂಚಾಯತಿಗಳ ಅಂತರಿಕ ಸಂಪನ್ಮೂಲದಿಂದ ವೇತನ ನೀಡಬೇಕು ಆದರೆ, ಆದಾಯ ಇಲ್ಲದ ಕಾರಣ ವೇತನ ಬಾಕಿ ಉಳಿಸಿಕೊಂಡಿವೆ. ಪ್ರತಿ ಪಂಚಾಯತಿಯಲ್ಲಿ ಎಂಟರಿಂದ 15 ಸಿಬ್ಬಂದಿ ಇದ್ದು ರಾಜ್ಯದಲ್ಲೆಡೆ ಸಾವಿರಾರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವೇತನವಿಲ್ಲದೇ ಸಿಬ್ಬಂದಿಗಳಿಗೆ ದಸರಾ ಮತ್ತು ದೀಪಾವಳಿ ಹಬ್ಬ ಕಹಿಯನ್ನು ನೀಡಿದೆ.
ಪಂಚಾಯ್ತಿ ವ್ಯಾಪ್ತಿಯ ಕುಡಿಯುವ ನೀರಿನ ಕೊಳವೆ ಬಾವಿ, ಬೀದಿದೀಪ ಮತ್ತು ಕಚೇರಿಗಳ ವಿದ್ಯುತ್ ಶುಲ್ಕ ಪಾವತಿಗಾಗಿ ಇರುವ ಎಸ್ಕ್ರೋ ಖಾತೆ ಅನುದಾನ 2021 22 ನೇ ಸಾಲಿನಲ್ಲಿ ಬಿಡುಗಡೆಯಾಗಿಲ್ಲದ ಕಾರಣ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವರೆಗೆ ವಿದ್ಯುತ್ ಶುಲ್ಕ ಪಾವತಿಸುವುದು ಪಂಚಾಯಿತಿಗಳಿಗೆ ದೊಡ್ಡ ಸವಾಲಾಗಿದೆ.