ಪಡಿತರ ಚೀಟಿದಾರರಿಗೆ ಮನೆಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ನವೆಂಬರ್ ಒಂದರಂದು ಜಾರಿಗೆ ತರಲು ಸರ್ಕಾರ ಯೋಜಿಸಿದೆ.ಇದರ ಮೊದಲ ಹಂತವಾಗಿ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೆ ತರಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಹಾರ ಸಚಿವ ಉಮೇಶ್ ಕತ್ತಿ “ಮನೆಬಾಗಿಲಿಗೆ ಪಡಿತರ” ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸಿದ್ಧತೆ ಆರಂಭಿಸುವಂತೆ ಆದೇಶ ನೀಡಿದ್ದೇವೆ ಎಂದರು.
ಆಂಧ್ರಪ್ರದೇಶದ ಮಾದರಿಯಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದೆ. ಯೋಜನೆಯ ಜಾರಿಗೆ ಬೇಕಿರುವ ಸೌಲಭ್ಯಗಳು, ವೆಚ್ಚ, ಮತ್ತಿತರ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪ್ರಸ್ತಾವದ ಪ್ರಕಾರ, ಮನೆ ಬಾಗಿಲಿಗೆ ಪಡಿತರ ಸಾಗಿಸುವುದಕ್ಕೆ ಪ್ರತಿ ನ್ಯಾಯಬೆಲೆ ಅಂಗಡಿಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅವರು ಖರೀದಿಸುವ ವಾಹನಕ್ಕೆ ಸರಕು ಮತ್ತು ಸೇವಾ ತೆರಿಗೆ, ಸಹಾಯಧನ ಸೇರಿದಂತೆ ಶೇ.30 ರಷ್ಟು ನೆರವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
“ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಇದೆ 28ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ಯೋಜನೆ ಅನುಷ್ಠಾನದ ದಿನಾಂಕ ಕುರಿತು ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ಯೋಜನೆಯ ಜಾರಿಗೆ 10,000 ವಾಹನಗಳ ಅಗತ್ಯವಿದೆ. ವಾಹನ ಖರೀದಿ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಯೋಜನೆ ಆರಂಭ ದಿನಾಂಕವನ್ನು ಈಗಲೇ ಹೇಳುವುದು ಕಷ್ಟ ಎಂದು ಸಚಿವರು ತಿಳಿಸಿದ್ದಾರೆ.
ಪ್ರತಿ ಮನೆಗೆ ಪಡಿತರ ಸಧ್ಯದಲ್ಲೇ ನಿರ್ಧಾರ
Date: