ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ತನ್ನದೇ ಖ್ಯಾತಿ ಇದೆ. ಅಷ್ಟೇ ಅಲ್ಲದೆ ಸರ್ಕಾರಿ ಆಸ್ಪತ್ರೆಗಳೆಂದರೆ ಶ್ರೀ ಸಾಮಾನ್ಯರಿಗೆ ಸುಲಭ ಚಿಕಿತ್ಸೆಯ ಕೇಂದ್ರಗಳಾಗಿವೆ. ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳ ಮೂಲಕ ತಪಾಸಣೆ ಕೈಗೆಟಕುವ ದರದಲ್ಲಿ ಇರುತ್ತವೆ.ಆದರೆ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿನ ಎಂಆರ್ ಐ ಸ್ಕ್ಯಾನಿಂಗ್ ಯಂತ್ರ ಸಾಮಾನ್ಯರ ಪಾಲಿಗೆ ಕನ್ನಡಿಯೊಳಗಿನ ಗಂಟೆನೋ ಅನಿಸುವ ಆತಂಕ ಉಂಟಾಗಿದೆ. ಆರು ತಿಂಗಳೇ ಕಳೆದಿದ್ದರೂ, ಎಂ ಆರ್ ಐ ಯಂತ್ರವು ಸಂಪೂರ್ಣ ದುರಸ್ತಿ ಕಂಡಿಲ್ಲ. ಹೀಗಾಗಿ ತಪಾಸಣೆ ಕಾರ್ಯ ನಿಂತಿದೆ.
ಇದರಿಂದಾಗಿ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಸರ್ಕಾರಿ ಆಸ್ಪತ್ರೆ ಇದ್ದರೂ, ದುಬಾರಿ ದರ ನೀಡಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವಂತಾಗಿದೆ. ಕೊರೊನಾ ಸೋಂಕು ಉಲ್ಭಣಗೊಂಡಿದ್ದ ಸಂದರ್ಭದಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಯಂತ್ರ ಇದ್ದ ಕೊಠಡಿಯೊಳಗೆ ಇತರೇ ಸಾಧನಗಳನ್ನು ಸಾಗಿಸುವ ವೇಳೆ ಯಂತ್ರದ ಹೀಲಿಯಂ ಸೋರಿಕೆಯಾಗಿದೆ. ಇದರಿಂದಾಗಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ಯಂತ್ರ ಕೆಲಸ ನಿರ್ವಹಿಸದಂತಾಗಿದೆ ಎಂಬುದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆಸ್ಪತ್ರೆ ಆಡಳಿತ ಮಂಡಳಿ ಪತ್ರ ವ್ಯವಹಾರ ಕೈಗೊಂಡು ಮೂರ್ನಾಲ್ಕು ತಿಂಗಳು ಕಳೆದ ಮೇಲೆ ಯಂತ್ರವನ್ನು ಸರಿಪಡಿಸಲಾಗಿತ್ತು. ಆದರೆ, ಅದನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಯೋಗಾರ್ಥ ಪರೀಕ್ಷೆ ನಡೆಸಿ ಹಸ್ತಾಂತರಿಸುವ ವೇಳೆ ಮತ್ತೆ ಹೀಲಿಯಂ ಅನಿಲ ಸೋರಿಕೆ ಆಗಿದೆ ಎಂದು ತಿಳಿದು ಬಂದಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಪರೀಕ್ಷೆಗೆ 1,500 ರೂಪಾಯಿ ದರ ನಿಗದಿಪಡಿಸಲಾಗಿದೆ. ಆದರೆ, ಇದೀಗ ರೋಗಿಗಳು ಖಾಸಗಿ ಲ್ಯಾಬ್ ಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ವರದಿ ತರಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಸರ್ಕಾರ ನಿಗದಿಪಡಿಸಿರುವ 1,500 ರೂ. ವೆಚ್ಚದಲ್ಲೇ ಪರೀಕ್ಷೆ ಮಾಡುವಂತೆ ಖಾಸಗಿ ಲ್ಯಾಬ್ ಗಳಿಗೆ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಬಡಜನರ ಪಾಲಿಗೆ ಅನುಕೂಲವಾಗಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಳಾಗಿರುವ ಯಂತ್ರವನ್ನು ಶೀಘ್ರವಾಗಿ ಸಂಪೂರ್ಣ ದುರಸ್ತಿಪಡಿಸಬೇಕು ಅಥವಾ ಹೊಸ ಯಂತ್ರವನ್ನು ಖರೀದಿಸಿ , ಬಡ ಜನರಿಗೆ ಆಗುತ್ತಿರುವ ಆರ್ಥಿಕ ಹೊರೆ ಮತ್ತು ಆತಂಕವನ್ನು ನೀಗಿಸಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಎಂಆರ್ ಐ ಯಂತ್ರ ಶೀಘ್ರ ಬಳಕೆಗೆ ಬರಲಿ
Date: