ಆಸೆ, ದ್ವೇಷ ಬಿಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಖ್ಯಾತ ನಾಣ್ಯ ಸಂಗ್ರಾಹಕ ಹೆಚ್. ಖಂಡೋಬರಾವ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಖಂಡೋಬರಾವ್ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಅಮೂಲ್ಯ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮನತುಂಬಿದ ಅಭಿನಂದನೆ ಸಲ್ಲಿಸಿದ್ದಕ್ಕೆ ನನ್ನ ಕೃತಜ್ಞತೆಗಳು. ಮನುಷ್ಯ ಸಾಯುವ ಮೊದಲು ಏನಾದರೂ ಸಾಧನೆ ಮಾಡಲೇಬೇಕು. ಸಾಧನೆ ಹೇಗೆ ಮಾಡಲು ಸಾಧ್ಯ ಎಂದರೆ ಮೊದಲು ಆಸೆ ಮತ್ತು ದ್ವೇಷವನ್ನು ಬಿಡಬೇಕು. ಬಹುಶಃ ಆಸೆ ಮತ್ತು ದ್ವೇಷ ಬಿಟ್ಟಿದ್ದರೆ ರಾಮಾಯಣ ಮತ್ತು ಮಹಾಭಾರತದ ಕತೆಗಳು ನಡೆಯುತ್ತಲೇ ಇರಲಿಲ್ಲ. ಆಸೆ ಬದಲು ಜ್ಞಾನ, ದ್ವೇಷದ ಬದಲು ಸಾಧನೆ ಮಾಡಬೇಕು ಎಂದರು.
ನನ್ನ ಬಗ್ಗೆ ಅಭಿಮಾನಿಗಳು, ಗೆಳೆಯರು, ತುಂಬು ಹೃದಯದಿಂದ ಮಾತನಾಡಿದ್ದಾರೆ. ನನಗೊಂದು ಉನ್ನತ ಸ್ಥಾನ ಕೊಟ್ಟಿದ್ದಾರೆ. ಅಭಿನಂದನಾ ಸ್ಥಾನ ಕೊಟ್ಟಿದ್ದಾರೆ. ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಪರಿವಾರದವರು ಮತ್ತು ನನ್ನ ಪತ್ನಿಯ ಕಡೆಯವರು ವಿಶೇಷವಾಗಿ ಅಭಿನಂದಿಸಿದ್ದು ನನಗೆ ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.
ಆದರ್ಶದ ಬದುಕು ನಮ್ಮದಾಗಬೇಕು. ಮನುಷ್ಯ ಒಳ್ಳೆಯ ಗುಣಗಳನ್ನು ಮತ್ತು ನಿರಂತರ ಚಟುವಟಿಕೆಯನ್ನು ಬೆಲೆಸಿಕೊಂಡರೆ ಉತ್ತಮ ಜೀವನ ಮತ್ತು ಸಂಸ್ಕಾರವನ್ನು ಪಡೆಯಬಹುದಾಗಿದೆ. ನನ್ನೆಲ್ಲಾ ಸಾಧನೆಗೆ ಗೆಳೆಯರ ಜೊತೆಗೆ ನನ್ನ ಪತ್ನಿಯೂ ಮುಖ್ಯ ಎಂದ ಅವರು, ಬಯಲು ಸೀಮೆಯ ಹುಡುಗ ನಾನು ಮಲೆನಾಡ ಹುಡುಗಿ ನನ್ನ ಪತ್ನಿ. ನಾನು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳು ಹೋದ ಮೇಲೆ ಅವಳಿಗಾಗಿಯೇ ಈ ಅಮೂಲ್ಯ ಶೋಧ ನಿರ್ಮಿಸಿದೆ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿಬಾರ್ಕೂರು ಮಹಾಸಂಸ್ಥಾನದ
ಡಾ.ವಿಶ್ವ ಸಂತೋಷಭಾರತಿ ಸ್ವಾಮೀಜಿ, ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಬಾಗಲಕೋಟೆಯ ಉದ್ಯಮಿ ಮಾರುತಿ ರಾವ್ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.