ಪಂಚ ರಾಜ್ಯ ಚುನಾವಣೆ ಮುಗಿದ ಬಳಿಕ ಕನಿಷ್ಠ ಬೆಂಬಲ ಬೆಲೆ ಕುರಿತು ಚರ್ಚಿಸಲು ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ತೋಮರ್, ಎಂಎಸ್ ಪಿಗೆ ಕಾನೂನು ಮಾನ್ಯತೆ ನೀಡುವ ಸಂಬಂಧ ಸಮಿತಿ ರಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ನೀಡಿರುವುದು ಇಡೀ ದೇಶಕ್ಕೇ ಗೊತ್ತಿದೆ. ಸಮಿತಿ ರಚನೆ ಪ್ರಕ್ರಿಯೆಯನ್ನು ಕೃಷಿ ಸಚಿವಾಲಯ ಕೈಗೆತ್ತಿಕೊಂಡಿದೆ.
ಈ ಸಂಬಂಧ ಸಚಿವಾಲಯವು ಚುನಾವಣಾ ಆಯೋಗದ ಸ್ಪಷ್ಟನೆ ಕೋರಿತ್ತು.
ಪಂಚರಾಜ್ಯ ಚುನಾವಣೆ ಮುಗಿದ ಬಳಿಕ ಸಮಿತಿ ರಚಿಸುವಂತೆ ಆಯೋಗ ಸೂಚನೆ ನೀಡಿದೆ ಎಂದು ತಿಳಿಸಿದರು. ದೇಶದ ಅಗತ್ಯಕ್ಕೆ ಅನುಗುಣವಾಗಿ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರುವುದು, ಎಂಎಸ್ ಪಿಯನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಪಾರದರ್ಶಕವಾಗಿಸುವುದು, ಸಹಜ ಕೃಷಿಗೆ ಉತ್ತೇಜನ ನೀಡುವುದು ಈ ಮೂರು ವಿಷಯಗಳ ಕುರಿತು ಸಮಿತಿಯು ಸರ್ಕಾರಕ್ಕೆ ಶಿಫಾರಸು ನೀಡಲಿದೆ.
ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಅಧಿಕ ಎಂಎಸ್ ಪಿ ಘೋಷಿಸಬೇಕೆಂಬ ಡಾ. ಸ್ವಾಮಿನಾಥನ್ ಆಯೋಗವು ಮಾಡಿದ್ದ ಶಿಫಾರಸನ್ನು ಅಂದಿನ ಸರಕಾರದ ಅಂತರ್ ಸಚಿವಾಲಯ ಸಮಿತಿ ತಿರಸ್ಕರಿಸಿದೆ ಎಂದು ತಿಳಿಸಿದರು.