ನಾಲ್ಕು ತಿಂಗಳ ಹಿಂದೆ ದರ ಏರಿಕೆ ಕಂಡು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಕರಿಮೆಣಸು ಧಾರಣೆ ಮತ್ತೆ ಕುಸಿಯಲಾರಂಭಿಸಿದೆ.
ಹೊಸ ಬೆಳೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರ ಜೊತೆಯಲ್ಲಿ ವಿದೇಶದಿಂದ ಕಳಪೆ ಕರಿಮೆಣಸು ಅಕ್ರಮವಾಗಿ ಆಮದಾಗುತ್ತಿರುವ ಕಾರಣ ಧಾರಣೆಯಲ್ಲಿ ಅಸ್ಥಿರತೆಯ ಮೂಡಿ ಬಂದಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಕಾಳುಮೆಣಸಿನ ದರ ಕಿಲೋವೊಂದಕ್ಕೆ 350ರಿಂದ 380ರೂ.ವರೆಗೆ ಇತ್ತು. ನವೆಂಬರ್ ತಿಂಗಳಲ್ಲಿ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 530 ರೂ.ವರೆಗೂ ಧಾರಣೆ ಏರಿಕೆಯಾಗಿತ್ತು. ಬಳಿಕ ಒಂದಷ್ಟು ಕುಸಿತ ದಾಖಲಿಸಿ ಜನವರಿ ತಿಂಗಳಲ್ಲಿ 490ರೂ.ನಿಂದ 500 ರೂ. ಆಸುಪಾಸಿನಲ್ಲಿತ್ತು.
ಆದರೆ ಈಗ ಕರಿಮೆಣಸಿಗೆ 460 ರೂ. ದರದಲ್ಲಿ ಖರೀದಿ ಯಾಗುತ್ತಿದೆ.
ಸರಕಾರದ ಮಟ್ಟದಲ್ಲಿ ಕಳಪೆ ಮಾಲು ಆಮದಾಗುವುದನ್ನು ತಡೆಗಟ್ಟಲು ಸಾಧ್ಯವಾಗದೇ ಇರುವುದರಿಂದ ಕರಿಮೆಣಸು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.