ಮುಗುಡ್ತಿ ಅರಣ್ಯ ಜೀವಿ ವಲಯ ವ್ಯಾಪ್ತಿಯ ತಳಲೆ ಗ್ರಾಮದ ಕಾರೆಹೊಂಡದ ರೈತರ ತೋಟಕ್ಕೆ ರಾತ್ರಿ ನುಗ್ಗಿದ ಕಾಡಾನೆ ಅಡಿಕೆ ಮರಗಳಿಗೆ ಹಾನಿಗೊಳಿಸಿದೆ.
ಇದುವರೆಗೆ ಈ ಭಾಗದಲ್ಲಿ ಆನೆ ಬಂದಿರುವ ನಿದರ್ಶನ ಇರಲಿಲ್ಲ. ಆದರೆ ಈಗ ಏಕಾಏಕಿ ರಾತ್ರಿ ವೇಳೆಯಲ್ಲಿ ರೈತರ ಜಮೀನುಗಳಿಗೆ ದಾಳಿ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಾರೆಹೊಂಡ ಗ್ರಾಮದ ರೈತ ಪರಶುರಾಮ ಅವರ ಅಡಿಕೆ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ತೆಂಗು ಹಾಗೂ ಅಡಿಕೆ ಮರಗಳನ್ನು ಕಿತ್ತು ಮುರಿದು ಹಾನಿಗೊಳಿಸಿ ಅಪಾರ ನಷ್ಟವನ್ನು ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ವನ್ಯಜೀವಿ ಅರಣ್ಯಾಧಿಕಾರಿ ರಾಜ ಅಹ್ಮದ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಆನೆ ಬಂದಿರುವ ಬಗ್ಗೆ ಖಾತ್ರಿಪಡಿಸಿಕೊಂಡರು.
ರೈತರು ಹೊಲಗದ್ದೆಗಳಿಗೆ ತೆರಳುವಾಗ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ಕಾಡಾನೆ ಭಾಗದಲ್ಲಿ ಮತ್ತೆ ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸಬೇಕೆಂದು ಮನವಿ ಮಾಡಿದರು.
ಶಿವಮೊಗ್ಗದ ಸಕ್ರೆಬೈಲು ಏರಿಯಾ ವನ್ಯಜೀವಿ ವಿಭಾಗದಲ್ಲಿ ಒಟ್ಟು 6500 ಹೆಕ್ಟೆರ್ ಅರಣ್ಯಭೂಮಿ ಇದೆ. ಅದರಲ್ಲಿ ಶಿವಮೊಗ್ಗದಲ್ಲಿ ಮೂರು ಗಂಡಾನೆಗಳಿವೆ. ಅದರಲ್ಲಿ ಒಂದು ಆನೆ ಕಾರೆಹೊಂಡದ ಕಡೆ ಸಂಚರಿಸಿರಬಹುದು.
ಇಲ್ಲವೆ, ಆಗುಂಬೆ ಭಾಗದಲ್ಲಿ ಒಂದು ಆನೆಯಿದೆ. ಅದು ಎನ್.ಆರ್ ಪುರ , ಕೊಪ್ಪ, ಶೃಂಗೇರಿ, ಆಗುಂಬೆ, ನಾಗರಹೊಂಡ, ಹೊಸನಗರ, ಲಿಂಗನಮಕ್ಕಿ ಡ್ಯಾಮ್ ಹೊರವಲಯದ ಮಾರ್ಗದಿಂದ ಬಂದಿರಬಹುದು. ಆದರೆ, ಈ ಆನೆಯು ಇಲ್ಲಿಯವರೆಗೆ ವರ್ಷದಲ್ಲಿ ಒಂದೇ ಬಾರಿಗೆ ಕಾಣಿಸಿತ್ತು. ಇಲ್ಲಿಯವರೆಗೂ ಯಾರಿಗೂ ತೊಂದರೆ ಏನೂ ಕೊಟ್ಟಿಲ್ಲ ಎಂದು
ಕಾಡಾನೆಗಳ ವಿಷಯವಾಗಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ಜೆ. ರವಿಕುಮಾರ್ ಅವರು ಕೆ ಲೈವ್ ನ್ಯೂಸ್ ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.