ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆ ಮಹೋತ್ಸವದ ನಲವತ್ತನೇ ವರ್ಧಂತ್ಯುತ್ಸವದ ಅಂಗವಾಗಿ ಭವ್ಯ ಅಗ್ರೋದಕ ಮೆರವಣಿಗೆ ನಡೆಯಿತು.
ಬಾಹುಬಲಿ ಮೂರ್ತಿ ಗೆ 216ಕಲಾಶಗಳಿಂದ ಪಾದಾಭಿಷೇಕ ನಡೆಯಿತು.
ಇದಕ್ಕೆ ನೀರು, ಹಾಲು, ಎಳನೀರು, ಕಬ್ಬಿನ ರಸ, ಮತ್ತು ಶ್ರೀಗಂಧ, ಅರಿಶಿನ, ಚಂದನ ಮೊದಲಾದ ಮಂಗಲ ದ್ರವ್ಯಗಳನ್ನು ಬಳಸಲಾಯಿತು.
ಉಜಿರೆಯ ಎಸ್ ಡಿಎಂ ಕಾಲೇಜು ಮತ್ತು ಸಿದ್ದವನ ಗುರುಕುಲದ ವಿದ್ಯಾರ್ಥಿಗಳು ಹಾಗೂ ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಪೂಜಾ ಮಂತ್ರ ಪಠಣ, ಪಂಚ ನಮಸ್ಕಾರ ಮಂತ್ರ ಪಠಣ ಮತ್ತು ಜಿನ ಭಕ್ತಿ ಗೀತೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮ ವಿಶೇಷ ಮೆರುಗನ್ನು ನೀಡಿತ್ತು.
ಧರ್ಮಸ್ಥಳದಲ್ಲಿ ಧರ್ಮ ಧ್ಯಾನಗಳಿಂದ ಪುಣ್ಯ ಸಂಚಯ ವಾಗುತ್ತದೆ. ಶ್ರದ್ಧಾ -ಭಕ್ತಿ, ದೃಢಸಂಕಲ್ಪ ದೊಂದಿಗೆ ವ್ರತ ನಿಯಮಗಳ ಪಾಲನೆ ಯಿಂದ ಮನೆಯಲ್ಲಿಯೇ ದೇವ ಗತಿ ಬಂಧವಾಗುತ್ತದೆ. ಮನೆಯೇ ಮಂದಿರ ವಾಗುತ್ತದೆ ಎಂದು ಮಂಗಲ ಪ್ರವಚನ ನೀಡಿದ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಹೇಳಿದ್ದಾರೆ.
ಜೈನ ಧರ್ಮದ ತಿರುಳಾದ ಅಹಿಂಸೆಯೇ ಶ್ರೇಷ್ಠ ತತ್ವವಾಗಿದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ಬಾಹುಬಲಿಯ ಜೀವನ ಸಂದೇಶ ಸಾರುತ್ತದೆ. ತ್ಯಾಗ ಮತ್ತು ವೈರಾಗ್ಯದ ಸಂಕೇತವಾದ ಬಾಹುಬಲಿ ಮೂರ್ತಿಯ ದರ್ಶನ, ಪೂಜೆ, ಆರಾಧನೆಯೊಂದಿಗೆ ಆತನ ಗುಣಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಗೃಹ ಲಯವನ್ನು ಜಿನಾಲಯ ವನ್ನಾಗಿ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಅವರು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು