ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಕಾಡು ಹಂದಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರೈತ ಹೋರಾಟ ಸಮಿತಿ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಅಂಬ್ಲಿಗೋಳ ವಲಯ ಅರಣ್ಯ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮಲೆನಾಡು ಭಾಗದಲ್ಲಿ ಕಾಡು ಹಂದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅರಣ್ಯದಂಚಿನ ಜಮೀನುಗಳಷ್ಟೇ ಅಲ್ಲದೆ ಖಾಸಗಿ ಜಮೀನುಗಳಿಗೂ ಹಿಂಡು ಹಿಂಡಾಗಿ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಅಡಿಕೆ, ಬಾಳೆ, ಭತ್ತ, ಮೆಕ್ಕೆಜೋಳ, ಕಬ್ಬು, ರಾಗಿ ಹಾಗೂ ತರಕಾರಿ ಬೆಳೆಗಳಿಗೆ ಹಂದಿಗಳ ದಾಳಿಯಿಂದ ಭಾರೀ ಹಾನಿಯಾಗುತ್ತಿದೆ. ಈಗಾಗಲೇ ಈ ವರ್ಷ ಭತ್ತ ಸೇರಿದಂತೆ ಹಲವು ಬೆಳೆಗಳ ಇಳುವರಿ ಕುಸಿದಿದ್ದು, ಕಾಡು ಹಂದಿಗಳ ಹಾವಳಿಯಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂಬ್ಲಿಗೋಳ, ಹರಿಹರಪುರ, ಯರೇಕೊಪ್ಪ, ಕಣಸೋಗಿ, ಕಲ್ಲೋಡ್ಡು, ಅರಿಶಿಣಗೆರೆ, ಸಾಲೂರು, ಚಿಕ್ಕಾಪುರ, ಚಿಕ್ಕಸಾಲೂರು, ಮಾಡ್ರವಳ್ಳಿ, ಹಿತ್ತಲ, ಕಲ್ಮನೆ, ಅಣ್ಣಾಪುರ, ಬನ್ನೂರು, ಹೋತನಕಟ್ಟೆ, ಸಿದ್ದಾಪುರ, ಡ್ಯಾಂ ಹೊಸೂರು, ಹುಣಸೆಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾಡು ಹಂದಿಗಳ ಹಾವಳಿ ನಿಯಂತ್ರಣಕ್ಕೆ ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ದೂರು ನೀಡಿದ್ದರೂ ಅರಣ್ಯ ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಂದಕ ನಿರ್ಮಾಣ, ಸೋಲಾರ್ ಬೇಲಿ ಸೇರಿದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ಅರಣ್ಯದಂಚಿನ ಜಮೀನುಗಳಿಗೆ ಮಾತ್ರವಲ್ಲದೆ ಎಲ್ಲಾ ಖಾಸಗಿ ಜಮೀನುಗಳಿಗೂ ಸೂಕ್ತ ರಕ್ಷಣೆ ಒದಗಿಸಬೇಕು. ಕಾಡು ಹಂದಿಗಳ ದಾಳಿಯಿಂದ ನಷ್ಟವಾಗಿರುವ ಬೆಳೆಗಳಿಗೆ ವೈಜ್ಞಾನಿಕವಾಗಿ ಹಾಗೂ ತಕ್ಷಣ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಅಧಿಕಾರಿಗಳು ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ತೀವ್ರ ವಾಗ್ವಾದ ನಡೆದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಂಬ್ಲಿಗೋಳ ಆರ್‌ಎಫ್‌ಒ ಮಾಧವ ಹರಸಾಹಸ ಪಟ್ಟರು.
ಹೋರಾಟಗಾರರಾದ ತೀನಾ ಶ್ರೀನಿವಾಸ್ ಹಾಗೂ ಈಶ್ವರಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಕಾಡು ಹಂದಿಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
