Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಅನ್ಯ ಭಾಷೆಗಳನ್ನು ಗೌರವಿಸುವುದರ ಜೊತೆಗೆ ನಮ್ಮ ಮಾತೃಭಾಷೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೋವರ್ಸ್ ಕ್ಲಬ್‌ನ ಅಧ್ಯಕ್ಷರಾದ ಹೆಚ್.ಸಿ. ಸುರೇಶ್ ಅವರು ಅಭಿಪ್ರಾಯಪಟ್ಟರು.
ಇಂದು ರೋವರ್ಸ್ ಕ್ಲಬ್ ನಲ್ಲಿ ಆಯೋಜಿಸಿದ 71 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಾತನಾಡಿದ ಅವರು, 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ಭಾಷೆಯು ಅತ್ಯಂತ ಶ್ರೀಮಂತವಾದ ಭಾಷೆಯಾಗಿದ್ದು, ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಲಬ್‌ನ ಗೌರವ ಕಾರ್ಯದರ್ಶಿ ಜಿ. ವಿಜಯ್ ಕುಮಾರ್ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದು ಸರಳ ಹಾಗೂ ವಿಶಿಷ್ಟ ಭಾಷೆಯಾಗಿದ್ದು, ಪ್ರತಿಯೊಂದು ಉದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡದ ಬಳಕೆ ಹೆಚ್ಚಾಗಬೇಕು ಎಂದು ಹೇಳಿದರು.
Kannada Rajyotsava ಕನ್ನಡವನ್ನು ಉಳಿಸಿ ಬೆಳೆಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಕನ್ನಡ ಭಾಷೆಯನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ, ವರ್ಷವಿಡೀ ನಿರಂತರವಾಗಿ ಗೌರವಿಸಿ, ದೈನಂದಿನ ಬದುಕಿನಲ್ಲಿ ಕನ್ನಡದ ಬಳಕೆಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಲಬ್‌ನ ನಿರ್ದೇಶಕರಾದ ಚಿನ್ನಪ್ಪ, ಜಿ.ಕೆ. ಪ್ರಕಾಶ್, ಅಗಡಿ ಮಹೇಶ್, ಸತ್ಯನಾರಾಯಣ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
