ಅಭಿವೃದ್ಧಿ ಎಂಬುದು ಸಂಕೀರ್ಣವಾದುದಲ್ಲ. ನನ್ನ ಗ್ರಾಮ, ಪ್ರದೇಶದ ವಿಕಸಿತವಾದರೆ ದೇಶ ಚೆನ್ನಾಗಿ ವೃದ್ಧಿಸುತ್ತದೆ. ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವುದು ಆದ್ಯತೆಯಾಗಬೇಕು. ನನ್ನ ಅಭಿಪ್ರಾಯದಲ್ಲಿ ಈ ದೇಶದ ಕಾರ್ಯಾಂಗದ ವ್ಯವಸ್ಥೆಯಲ್ಲಿರುವವರು ಸೂಕ್ತವಾದ ರೀತಿಯಲ್ಲಿ ಕೆಲಸ ಮಾಡಿದರೆ ದೇಶ ಸರಿದಾರಿಗೆ ಬರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಪ್ರತಿಪಾದಿಸಿದರು.
ಅವರು ವಿಶ್ವ ಯುವಕ ಕೇಂದ್ರ, ದೆಹಲಿ, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಶಿವಮೊಗ್ಗ ಇವರ ಸಹಯೋಗದೊಂದಿಗೆ ರಾಜ್ಯ ಪೊಲೀಸ್ ಇಲಾಖೆ, ಸಾಗರ ತಾಲೂಕು, ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ ಸೋಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜು ಮತ್ತು ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ ಜಂಟಿಯಾಗಿ ಶುಕ್ರವಾರ ಎಲ್‌ಬಿ ಕಾಲೇಜಿನ ದೇವರಾಜ್ ಅರಸು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಅಭಿವೃದ್ಧಿ ಹೊಂದಿದ ರಾಷ್ಟಕ್ಕಾಗಿ ಯುವಜನರ ಸಬಲೀಕರಣ: ವ್ಯಸನದಿಂದ ಮಹತ್ವಾಕಾಂಕ್ಷೆಯತ್ತ’ ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣದ ಸೂತ್ರ ಬದಲಾಗಬೇಕು. ನಾವು ‘ಮಾರ್ಕ್ಸ್’ವಾದಿಗಳಾಗುತ್ತಿದ್ದೇವೆ. ಇದರಿಂದ ಅಂಕಗಳಿಗೆ, ಉದ್ಯೋಗ, ಅವಕಾಶಗಳಿಗಾಗಿ ಸ್ಪರ್ಧೆಗಳೇ ಮುಖ್ಯವಾಗುತ್ತಿವೆ. ಇದರಿಂದ ದೇಶದ ಪರಂಪರೆ, ಸಂಪ್ರದಾಯಗಳನ್ನು ಕಲಿಸುವ ವಿಷಯ ಹಿಂದೆ ಬೀಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಷ್ಟ ಪಡುವಂತಹ ಮುಂದಿನ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡವರು ಸಾಧಕರಾಗಿ ಬದಲಾಗುತ್ತಾರೆ. ಆದರೆ ಈ ದಿನಗಳಲ್ಲಿ ಪ್ರತಿಭೆಗಳು ಅಪಾರವಾಗಿದ್ದರೂ ಅಗತ್ಯ ಪರಿಶ್ರಮ ಹಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಅದೃಷ್ಟಕ್ಕೆ ನಮ್ಮ ದೇಶ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಯುವ ಶಕ್ತಿಯನ್ನು ಹೊಂದಿದೆ. ಮೋದಿಯವರ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳ್ಳಲು ಭಾರತದಲ್ಲಿ ಅದು ಬಳಕೆಯಾಗಬೇಕು ಎಂದರು.
ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡ ಸಾಗರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಎನ್.ಜೆ. ಬೆನಕ ಪ್ರಸಾದ್ ಮಾತನಾಡಿ, ಒಂದೆಡೆ ತಲಾದಾಯದ ಮೇಲೆ ದೇಶದ ಪ್ರಗತಿಶೀಲತೆ ನಿರ್ಧಾರ ಆಗುತ್ತಿದೆ. ಆ ಅಂಶಕ್ಕೆ ಮಾನವ ಅಭಿವೃದ್ಧಿ ಸೂಚ್ಯಂಕವೂ ಮಾನದಂಡವಾಗಬೇಕು ಎಂಬ ಪ್ರತಿಪಾದನೆಯಿದೆ. ಆರೋಗ್ಯ, ಶಿಕ್ಷಣ, ಸೌಕರ್ಯ ಸುಧಾರಣೆ ಮೊದಲಾದ ಅಂಶಗಳಲ್ಲಿ ಹನಿಹನಿಗೂಡಿದರೆ ಹಳ್ಳ ಎಂಬಂತೆ ವಿದ್ಯಾರ್ಥಿಗಳು ಕೂಡ ಪಾತ್ರವಹಿಸಬೇಕಾಗಿದೆ ಎಂದರು.
ಇಂದಿನ ಜೆನ್ ಝೀಗಳ ಮಾಹಿತಿ ಮೂಲಗಳು ಕಡಿಮೆಯಿವೆ. ಅವರು ಬೇಗ ಪ್ರಚೋದನೆಗೊಳಗಾಗುತ್ತಿದ್ದಾರೆ. ಎಐ ಮೂಲಕ ಸೋಷಿಯಲ್ ಮೀಡಿಯಾಗಳನ್ನು ನಿಯಂತ್ರಿಸುವ ಶಕ್ತಿಗಳು ದೇಶದ ಪ್ರಭುತ್ವವನ್ನೇ ಪರಾವಲಂಬಿಗಳಾಗಿಸಿ ಹಣ ದೋಚುವ ಕೆಲಸ ಮಾಡುತ್ತಿವೆ. ಈ ಬಗ್ಗೆ ಯುವ ಜನತೆ ಅತ್ಯಂತ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಚಾರ್ಟೆಡ್ ಅಕೌಂಟೆಂಟ್ ಹಾಗೂ ಜೆಸಿಐ ಇಂಡಿಯಾ ವಲಯ ಅಧ್ಯಕ್ಷರಾದ ಮಧುಸೂಧನ್ ನಾವಡ ಮಾತನಾಡಿ, ವ್ಯಕ್ತಿತ್ವ ಎಂಬುದು ಒಂದೇ ದಿನಕ್ಕೆ ಬರುವಂತದಲ್ಲ. ಅದು ಬೆಳೆಸಿಕೊಳ್ಳುವಂತಹದು. ಸಮಾಜದಲ್ಲಿ ಗೌರವ ದೊರಕುವುದು ಕೂಡ ವ್ಯಕ್ತಿತ್ವದಿಂದಲೇ ಎಂಬುದು ಸ್ಪಷ್ಟವಾಗಿರುವಾಗ ಜವಾಬ್ದಾರಿಗಳಿಗೆ ಹೆದರದೆ ಗುರಿಯನ್ನು ಸಾಧಿಸಲು ಹೊರಡಬೇಕು ಎಂದು ಕರೆ ನೀಡಿದರು.
ವಿಶ್ವ ಯುವಕ ಕೇಂದ್ರ, ನವದೆಹಲಿಯ ಹಿರಿಯ ಕಾರ್ಯಕ್ರಮ ಅಧಿಕಾರಿ ಮಂಜುನಾಥ್ ಕೆ. ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಾಚಾರ್ಯೆ ಪ್ರೊ. ಎಂ.ಸಿ.ಕೋಮಲ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್, ಖಜಾಂಚಿ ಕೆ.ವೆಂಕಟೇಶ್ ಕವಲಕೋಡು ಇದ್ದರು. ದಿಯಾ ಹೆಗಡೆ ಪ್ರಾರ್ಥಿಸಿದರು. ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಹೆಚ್. ಎಂ ಶಿವಕುಮಾರ್ ಸ್ವಾಗತಿಸಿದರು. ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಭದ್ರೀಶ್ ಬಿ.ಟಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಲ್.ಬಿ. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹರ್ಷ ವಿಮನ್ ವಂದಿಸಿದರು. ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಕು. ಸುಮಿತ್ರ, ಪ್ರತೀಕ್ಷಾ, ವಿದ್ಯಾ ಇವರುಗಳು ನಿರೂಪಿಸಿದರು.
ಕಾರ್ಯಾಂಗದ ಸಮರ್ಪಕ ಕಾರ್ಯನಿರ್ವಹಣೆಯಿಂದ ದೇಶದ ಉನ್ನತಿ ಸಾಧ್ಯ: ಡಿ.ಎಸ್. ಅರುಣ್
Date:
