ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಫ್ಲೆಕ್ಸ್ ವಿಚಾರವಾಗಿ ಗದ್ದಲ ಉಂಟಾಗಿದೆ.
ಕೃಷಿ ಮೇಳದ ಮಾರ್ಗದುದ್ದಕ್ಕೂ ಕಾಂಗ್ರೆಸ್ ನಾಯಕರ ಫ್ಲೆಕ್ಸ್ಗಳನ್ನು ಅಳವಡಿಸಿರುವುದನ್ನು ಕಂಡು ಸಂಸದ ಬಿ.ವೈ. ರಾಘವೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೋ ಎಂದು ಪ್ರಶ್ನಿಸಿ ಆಯೋಜಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಬೇಕಾದರೆ ಫ್ಲೆಕ್ಸ್ ಹಾಕಿಕೊಳ್ಳಲಿ. ಆದರೆ ಕೃಷಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಫ್ಲೆಕ್ಸ್ಗಳ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಶಾಸಕ ಎಸ್.ಎನ್. ಚನ್ನಬಸಪ್ಪ ಕೂಡ ಸಂಸದರಿಗೆ ಸಾಥ್ ನೀಡಿದ್ದಾರೆ.
“ಈ ರೀತಿ ಮಾಡುವುದಾದರೆ ನಮ್ಮನ್ನು ಕಾರ್ಯಕ್ರಮಕ್ಕೆ ಯಾಕೆ ಕರೆಯುತ್ತೀರಿ? ನಾವು ಕಾರ್ಯಕ್ರಮಕ್ಕೆ ಬರಬೇಕೋ ಬೇಡವೋ? ಸರ್ಕಾರಕ್ಕೆ ಗೌರವ ಕೊಡಬೇಕು. ಹಾಗಂತ ನಮ್ಮನ್ನು ಡಿಗ್ರೇಡ್ ಮಾಡುವುದು ಸರಿಯೇ?” ಎಂದು ಸಂಸದರು ಕಿಡಿಕಾರಿದ್ದಾರೆ.
ಸಂಸದರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಪ್ರಮುಖರು, ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿ ಕ್ಷಮೆಯಾಚಿಸಿದ್ದಾರೆ.
