ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ, ಜೀವನದೃಷ್ಟಿ ಹಾಗೂ ವಿಶ್ವಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಭದ್ರಾವತಿಯ ಆಕಾಶವಾಣಿ ಕೇಂದ್ರವು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಯೋಜಕತ್ವದಲ್ಲಿ ‘ನಾವು ಕಂಡಂತೆ ಕುವೆಂಪು’ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾಗಿರುವ ಡಾ. ಡಿ.ವಿ. ಪರಮಶಿವಮೂರ್ತಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆದವು. ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ. ಬಿ.ಎಂ. ಪುಟ್ಟಯ್ಯ ಅವರು ಕಾರ್ಯಕ್ರಮದ ಆಶಯವನ್ನು ಪರಿಚಯಿಸಿದರು.
ಈ ಕಾರ್ಯಕ್ರಮದಲ್ಲಿ ಕುವೆಂಪು ಅವರ ನೇರ ಶಿಷ್ಯರು, ಅವರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಹೋರಾಟಗಾರರನ್ನು ಸಂದರ್ಶಿಸಿ, ಕುವೆಂಪು ಅವರ ಸಾಹಿತ್ಯಿಕ ಕೊಡುಗೆ, ಚಿಂತನೆಗಳು ಮತ್ತು ವಿಶ್ವಮಾನವ ಸಂದೇಶವನ್ನು ಕೇಳುಗರಿಗೆ ತಲುಪಿಸಲಾಗುತ್ತದೆ ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ನಂದನ್ ಕುಮಾರ್ ಎಲ್.ಒ.,ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಎಸ್. ಎಸ್.ಕೃಷ್ಣಪ್ಪ,ಹಿರಿಯ ಉದ್ಘೋಷಕರಾದ ಎಂ.ಕೆ. ಶಿವಕುಮಾರ್ ಹಾಗೂ ಎಚ್.ಎಂ.ಮಹೇಶ್ ಉಪಸ್ಥಿತರಿದ್ದರು.
‘ನಾವು ಕಂಡಂತೆ ಕುವೆಂಪು’ಕಾರ್ಯಕ್ರಮವು ನವೆಂಬರ್ 1ರಿಂದ ಪ್ರತಿ ಭಾನುವಾರ ಬೆಳಿಗ್ಗೆ 7.15ಕ್ಕೆ ಆಕಾಶವಾಣಿ ಭದ್ರಾವತಿ–ಶಿವಮೊಗ್ಗ ಕೇಂದ್ರದಿಂದ ಪ್ರಸಾರವಾಗಲಿದೆ.
