ಶಿವಮೊಗ್ಗ ನಗರದ ಕೋಟೆಗಂಗೂರು ಸಮೀಪ ಇಂದು ಬೆಳಿಗ್ಗೆ ಆನಂದ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ರೈಲ್ವೆ ಹಳಿಯ ಮೇಲೆ ಬಿಟ್ಟುಹೋಗಿರುವ ಘಟನೆ ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆನಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ, ಆನಂದ್ ಮತ್ತು ಭಾಸ್ಕರ್ ನಡುವೆ ಸುಮಾರು 15 ದಿನಗಳ ಹಿಂದೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದ್ದು, ಈ ವಿಚಾರವಾಗಿ ಇಬ್ಬರೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಿಂದಿನ ಮನಸ್ತಾಪಕ್ಕೂ ಈಗ ನಡೆದಿರುವ ಹಲ್ಲೆಗೂ ಸಂಬಂಧವಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಇನ್ನೊಂದೆಡೆ, ಕೋಟೆಗಂಗೂರು ಸುತ್ತಮುತ್ತ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
