ಪತ್ರಕರ್ತ ಹಾಗೂ ಸಂಪದ ಸಾಲು ಪತ್ರಿಕೆಯ ಸಂಪಾದಕ ವೆಂಕಟೇಶ ಎಸ್ ಸಂಪ ಅವರಿಗೆ ಮತ್ತೊಂದು ಪ್ರತಿಷ್ಠಿತ ಗೌರವ ಲಭಿಸಿದೆ. ಜಿಎಸ್ ಹೈ-ಟೆಕ್ ಸೊಲ್ಯೂಷನ್ಸ್ ಸಂಸ್ಥೆ ಮತ್ತು ಕನ್ನಡ ಸ್ನೇಹ ಬಳಗ ನೀಡುವ ಇಂಟರ್ನ್ಯಾಷನಲ್ ನೋಬ್ಲರ್ ಅವಾರ್ಡ್-೨೦೨೬ ಅನ್ನು ೨೦೨೬ರ ಅ. ೨೫ ರಂದು ಗೋವಾದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘಟಕ ಮತ್ತು ಉದ್ಯಮಿ ಡಾ.ಜಿ. ಶಿವಣ್ಣ ತಿಳಿಸಿದ್ದಾರೆ.
ಸಂಪ ಅವರಿಗೆ ಈಗಾಗಲೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ, ಕೇಂದ್ರ ಸರ್ಕಾರದ ಸಹಯೋಗದ ಡಾ. ಎ.ಪಿ. ಜೆ ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.
ವೆಂಕಟೇಶ ಎಸ್ ಸಂಪ ಅವರು ಕಳೆದ ೨೦ ವರ್ಷಗಳಿಂದ ಸಂಪದ ಸಾಲು ಪತ್ರಿಕೆಯನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ. ಸಮಾಜಮುಖಿ ಚಿಂತನೆ, ಯುವಜನರಿಗೆ ಪ್ರೇರಣೆ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಹಾಗೂ ಸಕಾರಾತ್ಮಕ ಬದಲಾವಣೆಯ ಆಶಯಗಳನ್ನು ತಮ್ಮ ಬರಹಗಳ ಮೂಲಕ ಓದುಗರಿಗೆ ತಲುಪಿಸುತ್ತಿದ್ದಾರೆ.
ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಅವರು, ವಿವಿಧ ಟಿವಿ ಚಾನೆಲ್ಗಳ ಚರ್ಚಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿಯೂ ನಟಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಎಂಬಿಎ ಪದವೀಧರರಾಗಿರುವ ಅವರು ಕೃಷಿಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದು, ವಿವಿಧ ಮಿಶ್ರ ಬೆಳೆಗಳ ಕೃಷಿ ಹಾಗೂ ಸಾವಯವ ಕೃಷಿಯ ಮೂಲಕ ಸ್ವಾವಲಂಬಿ ಬದುಕಿನ ಮಹತ್ವವನ್ನು ಸಾರುತ್ತಿದ್ದಾರೆ.
ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನೆಸ್ ಸಂಸ್ಥೆಯ ಮೂಲಕ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ.
ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ “”ನೋಬ್ಲರ್ ಅವಾರ್ಡ್- 2026 ” ಘೋಷಣೆ
Date:
