ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ತೆರಳುವ ಮತ್ತು ಮರಳಿ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲನ್ನು ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಹಬ್ಬಗಳ ಸಂದರ್ಭದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ, ಪ್ರಯಾಣಿಕರಿಗೆ ಸುಗಮ ಹಾಗೂ ಅನುಕೂಲಕರ ರೈಲು ಸಂಪರ್ಕ ಕಲ್ಪಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಯಶವಂತಪುರ ಜಂಕ್ಷನ್ ಮತ್ತು ಶಿವಮೊಗ್ಗ ಟೌನ್ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ತಾಳಗುಪ್ಪದವರೆಗೆ ವಿಸ್ತರಿಸಿರುವುದು ಸಾಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.
ನೈಋತ್ಯ ರೈಲ್ವೆಯ ಪ್ರಧಾನ ಕಚೇರಿಯ ಆದೇಶದಂತೆ, ರೈಲು ಸಂಖ್ಯೆ 16581 (ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್) ಹಾಗೂ ರೈಲು ಸಂಖ್ಯೆ 16582 (ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್ಪ್ರೆಸ್) ರೈಲುಗಳನ್ನು ನಿಗದಿತ ದಿನಗಳಲ್ಲಿ ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ.
ರೈಲು ಸಂಚಾರದ ಪ್ರಮುಖ ವಿವರಗಳು
• ರೈಲು ಸಂಖ್ಯೆ 16581: ಯಶವಂತಪುರದಿಂದ ಹೊರಟು ಶಿವಮೊಗ್ಗ ಟೌನ್ ಬದಲಿಗೆ ತಾಳಗುಪ್ಪದವರೆಗೆ ಸಂಚರಿಸಲಿದೆ.
• ರೈಲು ಸಂಖ್ಯೆ 16582: ತಾಳಗುಪ್ಪದಿಂದ ಹೊರಟು ಶಿವಮೊಗ್ಗ ಟೌನ್ ಮೂಲಕ ಯಶವಂತಪುರಕ್ಕೆ ಸಂಚರಿಸಲಿದೆ.
• ಸಂಚಾರದ ದಿನಾಂಕಗಳು: ಅಕ್ಟೋಬರ್ 18, 20, 22, 25, 27 ಮತ್ತು 29 ಹಾಗೂ ನವೆಂಬರ್ 3, 5, 8, 10 ಮತ್ತು 12, 2026. ಒಟ್ಟು 11 ಟ್ರಿಪ್ಗಳಿಗೆ ಈ ವಿಸ್ತರಣೆ ಅನ್ವಯಿಸುತ್ತದೆ.
• ತಾಳಗುಪ್ಪಕ್ಕೆ ಆಗಮನ: ರೈಲು ಸಂಖ್ಯೆ 16581 ಬೆಳಿಗ್ಗೆ 9.00 ಗಂಟೆಗೆ ತಾಳಗುಪ್ಪ ತಲುಪಲಿದೆ.
• ತಾಳಗುಪ್ಪದಿಂದ ನಿರ್ಗಮನ: ರೈಲು ಸಂಖ್ಯೆ 16582 ರಾತ್ರಿ 10.00 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ.
• ಶಿವಮೊಗ್ಗದಿಂದ ಯಶವಂತಪುರದವರಗೆ ಹಾಗೂ ಯಶವಂತಪುರದಿಂದ ಶಿವಮೊಗ್ಗದ ವರೆಗೆ ಈ ಹಿಂದೆ ಸಂಚರಿಸುತ್ತಿದ್ದ ವೇಳಾ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಸಾಗರ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ
ಈ ತಾತ್ಕಾಲಿಕ ವಿಸ್ತರಣೆಯಿಂದ ಶಿವಮೊಗ್ಗ, ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ, ಆನಂದಪುರಂ, ಅಡ್ಡೇರಿ, ಸಾಗರ ಹಾಗೂ ತಾಳಗುಪ್ಪದಲ್ಲಿ ರೈಲುಗಳ ನಿಲುಗಡೆ ಇದ್ದು, ಈ ಮಾರ್ಗದ ಪ್ರಯಾಣಿಕರಿಗೆ ಹೆಚ್ಚುವರಿ ರೈಲು ಸಂಪರ್ಕದ ಅನುಕೂಲ ದೊರೆಯಲಿದೆ. ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಕುಟುಂಬದೊಂದಿಗೆ ಪ್ರಯಾಣಿಸುವವರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ಇದು ನೆರವಾಗಲಿದೆ.
ರೈಲು ಸೇವೆಗಳನ್ನು ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುವ ಮೂಲಕ ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುಗಮ ಸಂಪರ್ಕ ಕಲ್ಪಿಸುವ ಈ ಕ್ರಮವು ರೈಲ್ವೆ ಸೇವೆಯ ಪ್ರಯೋಜನವನ್ನು ಇನ್ನಷ್ಟು ಜನರಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಸೌಲಭ್ಯವನ್ನು ಕಲ್ಪಿಸಿದ ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀಯವರಿಗೆ, ಕೇಂದ್ರದ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರದ ರಾಜ್ಯ ರೈಲ್ವೆ ಸಚಿವರಾದ ಶ್ರೀ ವಿ ಸೋಮಣ್ಣಅವರಿಗೆ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಸಂಸದರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು ತಮ್ಮ ಪ್ರಯಾಣದ ದಿನಾಂಕಕ್ಕೆ ಅನ್ವಯಿಸುವ ವೇಳಾಪಟ್ಟಿ, ನಿಲುಗಡೆ ಹಾಗೂ ಟಿಕೆಟ್ ಲಭ್ಯತೆಯ ವಿವರಗಳನ್ನು ರೈಲ್ವೆಯ ಅಧಿಕೃತ ಮಾಹಿತಿ ವ್ಯವಸ್ಥೆಯಲ್ಲಿ ಪರಿಶೀಲಿಸಿಕೊಂಡು ಪ್ರಯಾಣಿಸಬೇಕೆಂದು ಸಂಸದರು ಮನವಿ ಮಾಡಿದ್ದಾರೆ.
ಹಬ್ಬದ ಪ್ರಯುಕ್ತ ಯಶವಂತಪುರ-ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ- ಬಿ.ವೈ.ರಾಘವೇಂದ್ರ.
Date:
