Wednesday, October 7, 2026
Wednesday, October 7, 2026

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ವಿಶೇಷ ಗಮನ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

Date:

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಾಗೂ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು, ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ವಿಶೇಷ ಗಮನಹರಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಗಳ ಹೊಸ 15ಅಂಶಗಳ ಕಾರ್ಯಕ್ರಮದಡಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಾಲೆಯಿಂದ ಹೊರಗುಳಿದವರನ್ನು ತಡೆಯುವುದು, ಪೂರ್ವ ಮತ್ತು ಉತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ದೊರೆಯುವಂತೆ ನೋಡಿಕೊಳ್ಳುವುದು, ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಆರೋಗ್ಯ ಸೌಲಭ್ಯ ಒದಗಿಸುವಂತೆ ನೋಡಿಕೊಳ್ಳುವುದರ ಜೊತೆಗೆ ಶಾಲೆಗಳಲ್ಲಿ ಉರ್ದು ಭಾಷಾ ಶಿಕ್ಷಕರ ನೇಮಕಾತಿ ಮತ್ತು ಮದರಸಾ ಶಿಕ್ಷಣದ ಆಧುನೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ ಆಸಕ್ತ ಮತ್ತು ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದರ ಜೊತೆಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಸಮಾನ ಅವಕಾಶ ಏರ್ಪಡುವಂತೆ ಸಂಬಂಧಿತ ಅಧಿಕಾರಿಗಳು ನೋಡಿಕೊಳ್ಳಬೇಕು. ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ವಾಸದ ಗುಣಮಟ್ಟ ಉತ್ತಮಪಡಿಸುವುದಲ್ಲದೆ ಕೋಮು ಸೌಹಾರ್ದತೆಯನ್ನು ಕಾಪಾಡುವುದು ಮತ್ತು ಕೋಮು ಹಿಂಸಾಚಾರವನ್ನು ತಡೆಗಟ್ಟಿ ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ವಿಶೇಷ ಗಮನಹರಿಸುವಂತೆ ಅವರು ಸೂಚಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಗುರಿಗಳನ್ನು( ಶೇ. 15ರಷ್ಟು) ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮಕ್ಕಳ ಶಾಲಾ ದಾಖಲಾತಿಯಲ್ಲಿ ಗುರಿಮೀರಿದ ಸಾಧನೆ ಮಾಡಿರುವುದು ಸಂತಸದ ಸಂಗತಿಯಾಗಿದೆ. ಅಲ್ಪಸಂಖ್ಯಾತ ಫಲಾನುಭವಿಗಳು ಸಲ್ಲಿಸುವ ಬಹುತೇಕ ಎಲ್ಲಾ ಅರ್ಜಿಗಳನ್ನು ಭಾಗ್ಯಲಕ್ಷ್ಮೀ ಯೋಜನೆಗೆ ಪರಿಗಣಿಸಲಾಗಿದೆ. ವಿದ್ಯಾರ್ಥಿನಿಲಯಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಕಾಯ್ದಿರಿಸಲಾದ ಸ್ಥಾನಗಳು ನಿಗಧಿಪಡಿಸಿದ ಕಾಲಮಿತಿಯಲ್ಲಿ ಭರ್ತಿಯಾಗದೆ ಉಳಿದಿದ್ದು, ಅವುಗಳನ್ನು ಭರ್ತಿ ಮಾಡಲು ಕಾಲಮಿತಿಯನ್ನು ವಿಸ್ತರಿಸಿ, ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಸ್ನಾತಕೋತ್ತರ ಪದವಿಯ ನಂತರದ ವಿದ್ಯಾಭ್ಯಾಸ ಮುಂದುವರೆಸುವ ಸಂಶೋಧನಾರ್ಥಿಗಳಿಂದ ಅರ್ಜಿ ಆಹ್ವಾನಿಸಿ, ವಿದ್ಯಾರ್ಥಿವೇತನ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾವಂತ ನಿರುದ್ಯೋಗಿ ಮಹಿಳೆ ಮತ್ತು ಪುರುಷರಿಗೆ ವಿವಿಧ ವಿಷಯಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ಯೋಜನೆಯಡಿಯಲ್ಲಿ ಆತ್ಯಾಧುನಿಕ ವಿಷಯಗಳಲ್ಲಿ ತರಬೇತಿಗಳನ್ನು ಆಯೋಜಿಸಿ, ತರಬೇತಿ ನೀಡಲಾಗುತ್ತಿದೆ ಎಂದ ಅವರು, ಅಲ್ಪಸಂಖ್ಯಾತರ ಕೃಷಿ ಕುಟುಂಬದವರಿಗಾಗಿ ಕೃಷಿ ಇಲಾಖೆಯು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಮೀನುಗಾರಿಕೆ ಇಲಾಖೆಯು ಯೋಜನೆಗಳನ್ನು ರೂಪಿಸಿದೆ ಎಂದ ಅವರು ಜಿಲ್ಲೆಯ ಸೊರಬ ಮತ್ತಿತರ ತಾಲೂಕುಗಳಲ್ಲಿ ರೇಷ್ಮೇ ಕೃಷಿಗೆ ವಿಫುಲ ಅವಕಾಶಗಳಿದ್ದು, ರೇಷ್ಮೇ ಕ್ಷೇತ್ರ ವಿಸ್ತರಣೆಗೆ ರೇಷ್ಮೇ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಜಿಲ್ಲೆಯ ಹೊಸನಗರ ಸೇರಿದಂತೆ ಕೆಲವು ಆಯ್ದ ತಾಲೂಕುಗಳಲ್ಲಿ ಖಬರಸ್ತಾನಕ್ಕೆ ಭೂಮಿ ದೊರೆಯದಾಗಿದೆ. ಜಿಲ್ಲಾಡಳಿತದ ವತಿಯಿಂದ ಖಬರಸ್ತಾನಕ್ಕೆ ಜಾಗವನ್ನು ಗುರುತಿಸಿ ಕೊಡಬೇಕು. – ಅಮೀರ್‌ಹಮ್ಝಾ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ನಾಮನಿರ್ದೇಶಿತ ಸದಸ್ಯರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ., ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗದ್ದಿಗೌಡರ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಸಿ.ಎಸ್.ಪದ್ಮರಾಜ್‌, ಎಸ್.ರಿಜ್ವಾನ್‌, ಅಮೀರ್‌ಹಮ್ಝಾ, ಅಜೀಮ್‌ಸಾಬ್‌, ಸ್ಟ್ಯಾನ್ಲಿ ಸುದರ್ಶನ್‌, ಜಾಹಿದ್‌ಅಹ್ಮದ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...