ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸುವುದು ಇಂದಿನ ಅಗತ್ಯವಾಗಿದೆ. ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಅನೇಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ರೋಟರಿ ಕ್ಲಬ್ ರಿವರ್‌ಸೈಡ್ ಅಧ್ಯಕ್ಷರಾದ ರವಿ ಮೂಡಬಾಗಿಲು ಹೇಳಿದರು.
ರೋಟರಿ ಕ್ಲಬ್ ರಿವರ್‌ಸೈಡ್ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ, ರಿವರ್ ಸೈಡ್ ಮತ್ತು ಸುಬ್ಬಯ್ಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಪುರಲೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿನಗರದ ರೋಟರಿ ಭವನದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದ ಶಿಬಿರದಲ್ಲಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಉಚಿತ ಆರೋಗ್ಯ ಶಿಬಿರಗಳು ಹಾಗೂ ರಕ್ತದಾನ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರವಿ ಮೂಡಬಾಗಿಲು ತಿಳಿಸಿದರು.
ಶಿಬಿರದಲ್ಲಿ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ, ಸಾರ್ವಜನಿಕರಿಗೆ ಆರೋಗ್ಯದ ಕುರಿತು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು. ಜೊತೆಗೆ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿ, ರಕ್ತದಾನ ಮಾಡಲು ಸಾರ್ವಜನಿಕರನ್ನು ಪ್ರೋತ್ಸಾಹಿಸಲಾಯಿತು. ನಾವು ಮಾಡುವ ರಕ್ತದಾನ ಮತ್ತೊಬ್ಬರ ಜೀವ ಉಳಿಸಲು ನೆರವಾಗುವ ಮಹತ್ವದ ಮಾನವೀಯ ಸೇವೆಯಾಗಿದೆ ಎಂದು ತಿಳಿಸಲಾಯಿತು.
ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಶಿಬಿರದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು.
ಶಿಬಿರದಲ್ಲಿ ಕೃಷಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು, ಶಾಲಾ ಮಕ್ಕಳು, ಕಾರ್ಮಿಕ ವರ್ಗದವರು, ರೋಟರಿ ಸಂಸ್ಥೆಯ ಸದಸ್ಯರು, ಕುಟುಂಬದವರು ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೂಪಾ ರವಿ, ಕಾರ್ಯದರ್ಶಿ ನಟರಾಜ್, ಸುಮಾ ನಟರಾಜ್, ಆನಂದಮೂರ್ತಿ, ದೇವೇಂದ್ರಪ್ಪ, ನಿರಂಜನಮೂರ್ತಿ, ಡಾ. ಯಶವಂತ್, ಡಾ. ಶುಶ್ರುತ, ಡಾ. ವೇಣುಗೋಪಾಲ್ ಸೇರಿದಂತೆ ರೋಟರಿ ಹಾಗೂ ಇನ್ನರ್‌ವೀಲ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು.
