ಅಮೆರಿಕ ಹಾಗೂ ವೈದ್ಯ ವೃತ್ತಿಯ ಅನುಭವಗಳು ತಮ್ಮ ಸಾಹಿತ್ಯದ ಮೇಲೆ ಪ್ರಭಾವ ಬೀರಿವೆ ಎಂದು ಅಮೆರಿಕದ ವೈದ್ಯ ಹಾಗೂ ಸಾಹಿತಿ ಡಾ. ಗುರುಪ್ರಸಾದ್ ಕಾಗಿನೆಲೆ ಹೇಳಿದರು.
ಶಿವಮೊಗ್ಗದ ಫ್ರೆಂಡ್ಸ್ ಸೆಂಟರ್ ಹಾಲ್ನಲ್ಲಿ ನಡೆದ ಬಹುಮುಖಿಯ 84ನೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ತಮ್ಮ ತಾಯ್ನಾಡಾಗಿದ್ದರೂ ವಲಸೆಯ ಕಾರಣದಿಂದ ಹಿಂದಿನಂತೆಯೇ ತಾಯ್ನಾಡಿನೊಂದಿಗೆ ನಂಟು ಉಳಿಸಿಕೊಳ್ಳುವುದು ಕಷ್ಟವಾಗಿದೆ. ವಲಸೆ, ಸಂಸ್ಕೃತಿ, ಭಾಷೆ ಹಾಗೂ ಸಾಮಾಜಿಕ ಮಾಧ್ಯಮಗಳು ಬರವಣಿಗೆಯ ಮೇಲೆ ಪರಿಣಾಮ ಬೀರುತ್ತಿವೆ ಎಂದರು.
ತಮ್ಮ ಮಕ್ಕಳಿಗೆ ಭಾರತವೆಂದರೆ ಕೇವಲ ಒಂದು ದೇಶವಾಗಿದ್ದು, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ಸವಾಲಾಗಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದ್ದು, ಓದು ಜೀವನಶೈಲಿಯಾಗಿ ಉಳಿದಿಲ್ಲ. ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯಿಂದ ಓದುಗರು ಮತ್ತು ಸಾಹಿತಿಗಳ ನಡುವಿನ ಸಂಬಂಧ ಹೆಚ್ಚಾದರೂ, ಜಾಹೀರಾತಿನ ಪ್ರಭಾವವೂ ಬರವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಲಸೆ, ಸಿಟಿಜನ್ಶಿಪ್, ದೇಶ ಹಾಗೂ ಭಾಷೆಯ ವಿಚಾರಗಳು ತಮ್ಮ ಬರವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ವ್ಯಕ್ತಿಯ ಗುರುತಿನಲ್ಲಿ ಭಾಷೆ ಮತ್ತು ದೇಶ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಬಹುಮುಖಿಯ ಡಾ. ನಾಗಭೂಷಣ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಲೇಖಕರು ಹಾಗೂ ಸಾಹಿತಿಗಳಾದ ಎಂ.ಎನ್. ಸುಂದರರಾಜ್, ಜಿ. ವಿಜಯಕುಮಾರ್, ಡಾ. ಕೆ.ಜಿ. ವೆಂಕಟೇಶ್, ಕಾಂತೇಶ್ ಕದರಮಂಡಲಗಿ, ರವಿಶಂಕರ್, ಡಾ. ವಿನಯ್, ಡಾ. ಶ್ರೀಧರ್, ಡಾ. ಚಿತ್ರಾ, ಪುಟ್ಟಯ್ಯ ತಿಮ್ಮೋಲಿ ಸೇರಿದಂತೆ ಬಹುಮುಖಿ ತಂಡದ ಸದಸ್ಯರು ಉಪಸ್ಥಿತರಿದ್ದರು.
