Rotary Club of Shivamogga ಆಶ್ರಯ, ದೈಹಿಕ ಸುರಕ್ಷತೆ ಹಾಗೂ ಮಾನಸಿಕ ಶಾಂತಿ ಹಿರಿಯ ನಾಗರಿಕರ ಮೂಲಭೂತ ಮಾನವ ಹಕ್ಕುಗಳಾಗಿದ್ದು, ಆರ್ಥಿಕ ಸಂಕಷ್ಟವು ನ್ಯಾಯ ಪಡೆಯಲು ಎಂದಿಗೂ ಅಡ್ಡಿಯಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಹೇಳಿದರು.
ನಗರದ ರಾಜೇಂದ್ರ ನಗರದಲ್ಲಿರುವ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ ‘ಹಿರಿಯ ನಾಗರಿಕರಿಗೆ ಇರುವ ಹಕ್ಕುಗಳು ಮತ್ತು ಅವುಗಳ ಪಾಲನೆ ಹಾಗೂ ಅವರನ್ನು ರಕ್ಷಿಸುವ ಕಾನೂನುಗಳು’ ವಿಷಯದ ವಾರದ ಸಭೆಯಲ್ಲಿ ಅವರು ಕಾನೂನು ಅರಿವು ಮೂಡಿಸಿ ಮಾತನಾಡಿದರು.
ಹಿರಿಯ ನಾಗರಿಕರು ತಮ್ಮ ಆರ್ಥಿಕ ಸ್ಥಿತಿ ಅಥವಾ ವಾರ್ಷಿಕ ಆದಾಯವನ್ನು ಲೆಕ್ಕಿಸದೆ ಉಚಿತ ಕಾನೂನು ಸಹಾಯ ಪಡೆಯಲು ಅರ್ಹರಾಗಿರುತ್ತಾರೆ. ದೈಹಿಕ ಕಿರುಕುಳ, ಮನೆಯಿಂದ ಹೊರಹಾಕುವ ಬೆದರಿಕೆ ಅಥವಾ ಭಾವನಾತ್ಮಕ ಕಿರುಕುಳ ಎದುರಿಸುತ್ತಿರುವ ಹಿರಿಯ ನಾಗರಿಕರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಪ್ರಾತಿನಿಧ್ಯ, ಸಲಹೆ ಹಾಗೂ ಮಧ್ಯಸ್ಥಿಕೆ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯಡಿ ವಯಸ್ಕ ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಪೋಷಿಸುವುದು ಮತ್ತು ಅವರು ಗೌರವಯುತ ಜೀವನ ನಡೆಸಲು ಅಗತ್ಯ ನೆರವು ನೀಡುವುದು ಕಾನೂನುಬದ್ಧ ಜವಾಬ್ದಾರಿಯಾಗಿದೆ. ಈ ಕಾಯ್ದೆಯ ಉದ್ದೇಶ ಹಿರಿಯ ನಾಗರಿಕರ ಘನತೆ, ಕಲ್ಯಾಣ ಮತ್ತು ಭದ್ರತೆಯನ್ನು ರಕ್ಷಿಸುವುದಾಗಿದೆ ಎಂದು ಸಂತೋಷ್ ಎಂ.ಎಸ್. ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಮಾತನಾಡಿ, ಮಕ್ಕಳ ನಡುವಿನ ಆಸ್ತಿ ಅಥವಾ ನಾಗರಿಕ ಉತ್ತರಾಧಿಕಾರದ ವಿವಾದಗಳು ಹಿರಿಯರ ಶಾಂತಿಯುತ ಜೀವನದ ಹಕ್ಕಿಗೆ ಅಡ್ಡಿಯಾಗಬಾರದು. ಆಸ್ತಿ ಹಕ್ಕುಗಳಿಗಿಂತ ಹಿರಿಯರ ಘನತೆ ಮತ್ತು ಶಾಂತಿಯುತ ಬದುಕಿಗೆ ಆದ್ಯತೆ ನೀಡಬೇಕು ಎಂದರು.
Rotary Club of Shivamogga ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯ ಅನುಷ್ಠಾನದ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಇದೇ ವೇಳೆ ರೋಟೇರಿಯನ್ಸ್ಗಳ ಪ್ರಶ್ನೆಗಳಿಗೆ ನ್ಯಾಯಾಧೀಶ ಸಂತೋಷ್ ಎಂ.ಎಸ್. ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್. ಮನೋಹರ, ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಎನ್.ಎಚ್. ಕೃಷ್ಣಮೂರ್ತಿ, ನಿಕಟಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಕೇಶವಪ್ಪ, ಹೊಸತೋಟ, ರಮೇಶ್ ಭಟ್, ಡಾ. ರವಿಕಿರಣ್, ಸಾದ್ವಿ, ಸಿ. ಕಾರಂತ್ ಸೇರಿದಂತೆ ರೋಟೇರಿಯನ್ಸ್, ರೋಟೇರಿಯನ್ಸ್ ಆನ್ಸ್ ಹಾಗೂ ಇನ್ನರ್ ವೀಲ್ನ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.
