Sunday, October 4, 2026
Sunday, October 4, 2026

ಶಿವಮೊಗ್ಗ ನಗರ ಬೈಪಾಸ್ ಹಾಗೂ ಹೆದ್ದಾರಿ ಅಭಿವೃದ್ಧಿಗೆ ₹466.74 ಕೋಟಿ ಕೇಂದ್ರದ ಬೃಹತ್ ಅನುದಾನ

Date:

ಶಿವಮೊಗ್ಗ ನಗರದ ಬಹುದಿನಗಳ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.

ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಟ್ಟು ₹466.74 ಕೋಟಿ ಅನುದಾನ ಮಂಜೂರು ಮಾಡಿದೆ.

ಈ ಅನುದಾನದಡಿ ರಾಷ್ಟ್ರೀಯ ಹೆದ್ದಾರಿ-206, ಅಂದರೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಬಾಕಿ ಉಳಿದಿರುವ ಶಿವಮೊಗ್ಗ ನಗರ ಬೈಪಾಸ್ ಕಾಮಗಾರಿ ಪೂರ್ಣಗೊಳ್ಳಲಿದೆ.

ಹೊಸದಾಗಿ ಅನುಮೋದಿಸಿರುವ ಪಥ ನಕ್ಷೆಯಂತೆ ಹರಿಗೆಯಿಂದ ಪೊದಾರ್ ಶಾಲೆಯ ಪಕ್ಕವಾಗಿ, ವಿಮಾನ ನಿಲ್ದಾಣ ರಸ್ತೆಯ ಮೂಲಕ ಊರುಗಡೂರುವರೆಗೆ 4.74 ಕಿಲೋಮೀಟರ್ ಉದ್ದದ ನಾಲ್ಕು ಪಥದ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ ₹219.74 ಕೋಟಿ ಮೀಸಲಿಡಲಾಗಿದೆ. ಕಾಮಗಾರಿಯಲ್ಲಿ ಅಗತ್ಯವಿರುವ ವಾಹನ ಅಂಡರ್‌ಪಾಸ್ ಸೇರಿದಂತೆ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಕೂಡ ಒಳಗೊಂಡಿದೆ.

ಇನ್ನು ಬೈಪಾಸ್ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಹಾಗೂ ಯುಟಿಲಿಟಿ ಸ್ಥಳಾಂತರಕ್ಕೆ ₹230 ಕೋಟಿ ಮೀಸಲಿಡಲಾಗಿದೆ.

ಅದೇ ರೀತಿ ನಗರದ ವ್ಯಾಪ್ತಿಯಲ್ಲಿರುವ ಸುಮಾರು 12 ಕಿಲೋಮೀಟರ್ ಉದ್ದದ ನಾಲ್ಕು ಪಥದ ಹೆದ್ದಾರಿಗೆ ಮರು ಡಾಂಬರೀಕರಣ ಹಾಗೂ ಅಗತ್ಯ ಸುಧಾರಣಾ ಕಾಮಗಾರಿಗಳಿಗೆ ₹17 ಕೋಟಿ ವೆಚ್ಚ ಮಾಡಲಾಗುತ್ತದೆ.

ಬೈಪಾಸ್ ರಸ್ತೆ ಪೂರ್ಣಗೊಂಡ ಬಳಿಕ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸುವ ದೂರದ ಹಾಗೂ ಭಾರಿ ವಾಹನಗಳ ಸಂಚಾರವನ್ನು ನಗರದ ಹೊರಭಾಗಕ್ಕೆ ತಿರುಗಿಸಲು ಸಾಧ್ಯವಾಗಲಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ಪ್ರಯಾಣದ ಸಮಯವೂ ಇಳಿಕೆಯಾಗುವ ನಿರೀಕ್ಷೆಯಿದೆ.

ಹಾಗೆಯೇ ಪ್ರಮುಖ ವೃತ್ತಗಳ ಮೇಲಿನ ಸಂಚಾರ ಒತ್ತಡ ಕಡಿಮೆಯಾಗಲಿದ್ದು, ರಸ್ತೆ ಸುರಕ್ಷತೆ ಹಾಗೂ ಶಿವಮೊಗ್ಗ ನಗರ ಮತ್ತು ಮಲೆನಾಡಿನ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಇದರಿಂದ ವ್ಯಾಪಾರ, ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೂ ಅನುಕೂಲವಾಗಲಿದೆ.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನದ ಫಲವಾಗಿ ಈ ಅನುದಾನ ಮಂಜೂರಾಗಿದೆ ಎಂದು ತಿಳಿಸಲಾಗಿದೆ. ಬೈಪಾಸ್ ಕಾಮಗಾರಿ ಹಾಗೂ ನಗರ ಹೆದ್ದಾರಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಹಲವು ಹಂತಗಳಲ್ಲಿ ಅವರು ಮನವಿ ಮಾಡಿದ್ದರು.

ಇದರ ಜೊತೆಗೆ ಎಂ.ಆರ್.ಎಸ್. ವೃತ್ತ ಹಾಗೂ ಬಸ್ ನಿಲ್ದಾಣದ ವೃತ್ತದಲ್ಲಿ ಸ್ಕೈವಾಕ್ ನಿರ್ಮಾಣ, ಹಾಗೂ ದ್ವಾರಕಾ ಕನ್ವೆನ್ಷನ್ ಹಾಲ್ ಬಳಿ ಕಿರು ಸೇತುವೆ ನಿರ್ಮಾಣ ಕಾಮಗಾರಿಗಳ ಅಂದಾಜು ಪಟ್ಟಿಯನ್ನೂ ಕೇಂದ್ರ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಕಾಮಗಾರಿಗಳಿಗೂ ಶೀಘ್ರದಲ್ಲೇ ಮಂಜೂರಾತಿ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ಒಟ್ಟಾರೆ, ₹466.74 ಕೋಟಿ ಅನುದಾನದಿಂದ ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದ್ದು, ಬಹುದಿನಗಳ ಬೈಪಾಸ್ ಕಾಮಗಾರಿ ಪೂರ್ಣಗೊಳ್ಳುವ ಹಾದಿ ಸುಗಮವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...