ಹಿರಿಯರು ನಮ್ಮ ಭವಿಷ್ಯದ ಭದ್ರತೆಗೆ ಬುನಾದಿ ಹಾಕಿದವರು. ಹಿರಿಯರಿದ್ದರೆ ಮಾತ್ರ ಅದು ಕುಟುಂಬ. ಅವರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶಿವಮೊಗ್ಗ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಶಿವಮೊಗ್ಗ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ,”ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2026″ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು 35 ನೇ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮಾಡುತ್ತಿದ್ದೇವೆ. ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ. ಕೌಟುಂಬಿಕ ವ್ಯವಸ್ಥೆ ಇರುವ ದೇಶ ನಮ್ಮದು. ಹಿರಿಯರಿಂದಲೇ ಕುಟುಂಬಕ್ಕೆ ಸಂಭ್ರಮ ಎಂದರು.
ಇಂದಿನ ದಿನಗಳಲ್ಲಿ ಮೊಮ್ಮಕ್ಕಳು ಹಾಗೂ ತಾತಂದಿರು ಒಟ್ಟಿಗೆ ಬೆಳೆಯುವ ವಾತಾವರಣ ಕಡಿಮೆಯಾಗುತ್ತಿದೆ. ಹಿರಿಯರ ಜೊತೆ ಬೆಳೆಯುವ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಮತ್ತು ಮಾರ್ಗದರ್ಶನ ಸಿಗುತ್ತದೆ. ತಾತಂದಿರು ಮೊಮ್ಮಕ್ಕಳನ್ನು ದೇವಸ್ಥಾನಗಳಿಗೆ ಹಾಗೂ ಶುಭ ಸಮಾರಂಭಗಳು, ಎಲ್ಲಿಗೇ ಹೋದರೂ ಕರೆದೊಯ್ಯುವ ಮೂಲಕ ಸಂಸ್ಕೃತಿಯನ್ನು ಧಾರೆ ಎರೆಯುತ್ತಾರೆ” ಎಂದು ತಿಳಿಸಿದರು.
ಬಾಲ್ಯದಲ್ಲಿ ಹಿರಿಯರು ನೀಡುವ ಶಿಕ್ಷಣ ಮತ್ತು ಮೌಲ್ಯಗಳು ಮಕ್ಕಳು ದೊಡ್ಡವರಾದಾಗ ಅವರ ಜೀವನಕ್ಕೆ ಸರಿಯಾದ ದಾರಿ ತೋರಿಸುತ್ತವೆ. ಇಂತಹ ವಿಶಿಷ್ಟ ಕುಟುಂಬ ವ್ಯವಸ್ಥೆ ಮತ್ತು ಸಂಸ್ಕಾರ ನೀಡುವ ಪರಂಪರೆ ನಮ್ಮ ದೇಶದಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
172 ಜನರು ಪ್ರತಿ ವರ್ಷ, ಹಬ್ಬಗಳಲ್ಲಿ ಒಟ್ಟು ಸೇರುವ ಕುಟುಂಬ ಶಿವಮೊಗ್ಗದಲ್ಲೇ ಇದೆ. ಕೂಡು ಕುಟುಂಬಕ್ಕೆ ಮೇಲ್ಪಂಕ್ತಿ ಬರೆದ ದೇಶ ನಮ್ಮದು. ಕೊನೆಯ ಉಸಿರಿರುವವರೆಗೆ ತಂದೆ-ತಾಯಿಯನ್ನು ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ, ಪರಂಪರೆ. ತಂದೆ, ತಾಯಿ, ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿ ಬೇಕೆಂಬ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಮಾತ್ರ ಕಾಣಬಹುದು.
ಜಗತ್ತಿಗೇ ಶಕ್ತಿ ಕೊಡುವ ಕೆಲಸವನ್ನು ನಮ್ಮ ದೇಶ ಮಾಡುತ್ತಿದ್ದು ವಿಶ್ವಗುರು ಆಗುವ ಎಲ್ಲ ರೀತಿಯ ಸಂಗತಿಗಳು ನಮ್ಮ ಪರಂಪರೆಯಲ್ಲಿ ಅಡಕವಾಗಿವೆ. ಇಂತಹ ಸಂದರ್ಭದಲ್ಲಿ ವಿಶ್ವ ತಾಯಂದಿರ ದಿನ, ತಂದೆಯಂದಿರ ದಿನ ಎಲ್ಲ ಅವಶ್ಯಕತೆ ಇದೆಯೇ ನಮಗೆ ಎಂದು ಪಶ್ನಿಸಿದ ಅವರು ಈ ದಿನಗಳು ವಿಪರ್ಯಾಸವೆಸುತ್ತವೆ ಎಂದರು.
ಹಿರಿಯರು ಕಿರಿಯರ ಬದುಕನ್ನು ಕಟ್ಟಿಕೊಟ್ಟವರು. ಹಿರಿಯರ ಶಕ್ತಿ ಶ್ರೇಷ್ಠ ವಾದದ್ದು. ಅವರ ಜ್ಞಾನ, ಅನುಭವ ಮತ್ತು ಸಲಹೆಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸುವರ್ಣಾ ವಿ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್,
ಎಸಿ ಕಚೇರಿಯ ತಹಶೀಲ್ದಾರ್ ಲಿಂಗರಾಜ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ಚಂದ್ರಪ್ಪ, ಕಾರ್ಯದರ್ಶಿ ಷಣ್ಮುಖಪ್ಪ, ಇತರೆ ಅಧಿಕಾರಿ, ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಕರು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.
ಭವಿಷ್ಯದ ಬುನಾದಿ ಹಾಕಿದ ಹಿರಿಯರೇ ಕುಟುಂಬದ ಸಂಭ್ರಮ: ಎಸ್.ಎನ್.ಚನ್ನಬಸಪ್ಪ
Date:
